ಪುತ್ತೂರು: ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಭಿನಂದನೆ
ಪುತ್ತೂರು,ಮೇ 20: ಪುತ್ತೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಯು.ಟಿ. ತೌಸೀಫ್ ಮತ್ತು ಉಪಾಧ್ಯಕ್ಷ ಸಲೀಂ ಪಾಪು, ಎಪಿಎಂಸಿ ನೂತನ ಸದಸ್ಯರಾಗಿ ಆಯ್ಕೆಯಾದ ಶುಕೂರ್ ಹಾಜಿ ಮತ್ತು ಕಾರ್ತಿಕ್ ರೈ ಬೆಳ್ಳಿಪ್ಪಾಡಿ ಅವರಿಗೆ ಅಭಿನಂದನಾ ಸಮಾರಂಭ ಶನಿವಾರ ಪುತ್ತೂರು ಬ್ಲಾಕ್ ಕಚೇರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಶಕುಂತಳಾ ಶೆಟ್ಟಿ ಅವರು ಯುವ ಕಾಂಗ್ರೆಸ್ ಚುನಾವಣೆಯು ಜವಾಬ್ದಾರಿಯ ಹಂಚಿಕೆಯಾಗಿದ್ದು ಇದರಲ್ಲಿ ಗೆಲುವು ಸೋಲು ಎಂಬುದು ಮುಖ್ಯವಲ್ಲ. ಯುವ ಕಾಂಗ್ರೆಸ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಮ್ಮ ಮಕ್ಕಳಾಟಿಕೆಯನ್ನು ಬಿಟ್ಟು ಉತ್ತಮ ಸಮಿತಿಯನ್ನು ನಿರ್ಮಿಸಿ, ಜವಾಬ್ದಾರಿಯುತವಾಗಿ ಪಕ್ಷದ ಸಂಘಟನೆಯ ಕೆಲಸ ಮಾಡಬೇಕು. ಉತ್ತಮ ಸಮಿತಿಯನ್ನು ನಿರ್ಮಿಸಿ ಪಕ್ಷಕ್ಕಾಗಿ ದುಡಿಯುವ ಯುವ ಪಡೆಯನ್ನು ತಯಾರಿಸಬೇಕು ಎಂದರು. ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿಠಲ ರೈ ದೇರ್ಲ ಮತ್ತು ಕಾಂಗ್ರೆಸ್ ಸೇವಾದಳದ ತಾಲೂಕು ಸಂಚಾಲಕ ಜೋಕಿಂ ಡಿ’ಸೋಜ ಅವರ ತಾಯಿ ಸಿಸಿಲಿಯಾ ಡಿ’ಸೋಜ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಫಝ್ಲುಲ್ ರಹೀಂ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.