×
Ad

ಆದಿತ್ಯನಾಥ್ ಅಲ್ಲ,ಚೌಹಾಣ್ ಕೂಡ ಅಲ್ಲ: ನಕ್ಸಲರು ಈ ಸಿಎಂ ಅನ್ನು ತಮ್ಮ ಬದ್ಧ ವೈರಿ ಎಂದು ಘೋಷಿಸಿದ್ದಾರೆ!

Update: 2017-05-20 20:01 IST

 ಹೊಸದಿಲ್ಲಿ,ಮೇ 20: ಇವರ ಗುರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅಲ್ಲ, ಮಧ್ಯಪ್ರದೇಶದ ಶಿವರಾಜ್ ಚೌಹಾಣ್ ಅಲ್ಲ, ಕರ್ನಾಟಕದ ಸಿದ್ದರಾಮಯ್ಯ ಅಥವಾ ತಮಿಳುನಾಡಿನ ಎಡಪ್ಪಾಡಿ ಪಳನಿ ಸ್ವಾಮಿಯಂತೂ ಅಲ್ಲವೇ ಅಲ್ಲ. ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಕೂಡುಸ್ಥಳಗಳಲ್ಲಿ ತಳವೂರಿರುವ ಮಾವೋವಾದಿಗಳು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ತಮ್ಮ ‘ಮುಖ್ಯ ಶತ್ರು ’ಎಂದು ಘೋಷಿಸಿದ್ದಾರೆ.

ಸಿಪಿಐ(ಮಾವೋವಾದಿ) ಪಶ್ಚಿಮ ಘಟ್ಟಗಳ ಸಮಿತಿಯು ಪ್ರಕಟಿಸಿರುವ ತನ್ನ ಮುಖವಾಣಿ ‘ಕಮ್ಯುನಿಸ್ಟ್ ’ನ ಮೊದಲ ಸಂಚಿಕೆಯಲ್ಲಿ ರಾಜ್ಯದಲ್ಲಿಯ ನಕ್ಸಲರನ್ನು ಬೇಟೆಯಾಡುತ್ತಿರುವುದಕ್ಕಾಗಿ ಪಿಣರಾಯಿ ಅವರನ್ನು ‘ಮುಖ್ಯಶತ್ರು’ಎಂದು ಬಣ್ಣಿಸಿದೆ.

ಸಿಪಿಎಂ ನೇತೃತ್ವದ ಕೇರಳ ಸರಕಾರವು ಬಿಜೆಪಿ ಅಥವಾ ಕಾಂಗ್ರೆಸ್ ಸರಕಾರಗಳಿಗಿಂತ ಭಿನ್ನವೇನಲ್ಲ ಎಂದಿರುವ ಅದು, ಪಿಣರಾಯಿ ಕೇರಳದ ಮುಖ್ಯಮಂತ್ರಿಯಾದ ಬಳಿಕ ಪೊಲೀಸ್ ವ್ಯವಸ್ಥೆಯು ಮಾವೋವಾದಿಗಳನ್ನು ಗುರಿಯಾಗಿಸಿಕೊಂಡು ತೀವ್ರ ಕಾರ್ಯಾ ಚರಣೆ ನಡೆಸುತ್ತಿದೆ ಮತ್ತು ಅವರ ವಿರುದ್ಧ ದಾಳಿಗಳೂ ಹೆಚ್ಚಿವೆ ಎಂದು ಆರೋಪಿಸಿದೆ.

ಬಿಜೆಪಿ,ಕಾಂಗ್ರೆಸ್ ಮತ್ತು ಸಿಪಿಎಂ ನಡುವಿನ ಭಿನ್ನಾಭಿಪ್ರಾಯಗಳು ‘ರಾಜಕೀಯ ತಂತ್ರಗಳಿಗೆ ’ಮಾತ್ರ ಸೀಮಿತವಾಗಿದ್ದು, ಮಾವೋವಾದಿಗಳ ವಿಷಯದಲ್ಲಿ ಸಿಪಿಎಂ ನಿಲುವು ಉಳಿದೆರಡು ಪಕ್ಷಗಳಿಗಿಂತ ಬೇರೆಯಾಗಿಲ್ಲ ಎಂದು ‘ಕಮ್ಯುನಿಸ್ಟ್’ಹೇಳಿದೆ.

 2016,ನವಂಬರ್‌ನಲ್ಲಿ ನಿಲಂಬೂರಿನಲ್ಲಿ ನಡೆದ ಎನ್‌ಕೌಂಟರ್‌ಗೆ ಸಿಪಿಎಂ ನಾಯಕತ್ವದ ಸಂಪೂರ್ಣ ಆಶೀರ್ವಾದವಿತ್ತು ಎಂದು ಲೇಖನವು ಹೇಳಿದೆ. ಈ ಎನ್‌ಕೌಂಟರ್‌ನಲ್ಲಿ ಮಾವೋವಾದಿ ನಾಯಕ ಕುಪ್ಪು ದೇವರಾಜ್ ಕೊಲ್ಲಲ್ಪಟ್ಟಿದ್ದ.

ವಾಸ್ತವದಲ್ಲಿ ಬಿಜೆಪಿ ಮತ್ತು ಸಿಪಿಎಂ ಬಂಡವಳಶಾಹಿ ಶಕ್ತಿಗಳನ್ನು ಬೆಂಬಲಿಸುತ್ತವೆ ಮತ್ತು ಶ್ರೀಸಾಮಾನ್ಯನ ವಿರುದ್ಧವಾಗಿವೆ. ನಕ್ಸಲ್‌ಬಾರಿಯಲ್ಲಿ ನಕ್ಸಲ್ ಆಂದೋಲನದ ವಿರುದ್ಧ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಕ್ರಮವನ್ನು ಕೊಂಡಾಡಿದ ಇತಿಹಾಸ ಸಿಪಿಎಂ ಬೆನ್ನಿಗಿದೆ. ಅಧಿಕಾರದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಇರಲಿ...ಕ್ರಾಂತಿಕಾರಿಗಳ ಧ್ವನಿಯನ್ನಡಗಿಸಲು ಇವೆರಡೂ ಪಕ್ಷಗಳನ್ನು ಸಿಪಿಎಂ ಮೊದಲಿನಿಂದಲೂ ಬಳಸಿಕೊಂಡು ಬಂದಿದೆ ಎಂದಿರುವ ಲೇಖನದ ಉದ್ದಕ್ಕೂ, ತನ್ನ ಮಾವೋವಾದಿ ವಿರೋಧಿ ನೀತಿಗಾಗಿ ಕೇರಳ ಸರಕಾರವು ಶೀಘ್ರವೇ ಹಿನ್ನಡೆಯನ್ನು ಅನುಭವಿಸಲಿದೆ ಎಂದು ಪದೇಪದೇ ಎಚ್ಚರಿಕೆ ನೀಡಲಾಗಿದೆ.

ಕಳೆದ ಮೂರು ವರ್ಷಗಳಲ್ಲಿ ಪಶ್ಚಿಮ ಘಟ್ಟಗಳಲ್ಲಿ ಸಿಪಿಐ(ಮಾವೋವಾದಿ)ಯ ಪ್ರಭಾವ ಹೆಚ್ಚಾಗಿದೆ. ಅಟ್ಟಪ್ಪಾಡಿ ಮತ್ತು ವಯನಾಡ್ ಪ್ರದೇಶಗಳಲ್ಲಿ ಹಲವಾರು ಬುಡಕಟ್ಟು ಸಮುದಾಯಗಳು ನಮಗೆ ಸಹಕಾರ ನೀಡುತ್ತಿವೆ ಎಂದು ‘ಕಮ್ಯುನಿಸ್ಟ್’ ಹೇಳಿಕೊಂಡಿದೆ.

ನಿಲಂಬೂರು ಎನ್‌ಕೌಂಟರ್‌ಗೆ ಪ್ರತೀಕಾರವಾಗಿ ಕೇರಳದಾದ್ಯಂತ ಪೊಲೀಸ್ ಠಾಣೆಗಳು ಮತು ಅರಣ್ಯ ಇಲಾಖೆ ಕಚೇರಿಗಳ ಮೇಲೆ ದಾಳಿಗಳನ್ನು ನಡೆಸುವು ದಾಗಿಯೂ ಅದು ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News