ರಿಯಾದ್‌ಗೆ ಆಗಮಿಸಿದ ಡೊನಾಲ್ಡ್ ಟ್ರಂಪ್

Update: 2017-05-20 14:36 GMT

ರಿಯಾದ್, ಮೇ 20: ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತನ್ನ ಪ್ರಪ್ರಥಮ ವಿದೇಶ ಪ್ರವಾಸದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೌದಿ ಅರೆಬಿಯದ ರಾಜಧಾನಿ ರಿಯಾದ್‌ಗೆ ಆಗಮಿಸಿದ್ದಾರೆ.

ಮುಸ್ಲಿಮ್ ಸಮುದಾಯದೊಂದಿಗಿನ ತನ್ನ ಬಾಂಧವ್ಯವನ್ನು ಮರು ರೂಪಿಸುವ ಯತ್ನವಾಗಿ ಹಮ್ಮಿಕೊಂಡಿರುವ ಈ ಪ್ರವಾಸದಲ್ಲಿ ವಿವಿಧ ನಾಯಕರೊಂದಿಗೆ ಚರ್ಚೆ ನಡೆಸಲಿರುವ ಟ್ರಂಪ್, ರವಿವಾರ ರಿಯಾದ್‌ನಲ್ಲಿ ಸುಮಾರು 50 ಅರಬ್ ಮತ್ತು ಮುಸ್ಲಿಮ್ ನಾಯಕರನ್ನುದ್ದೇಶಿಸಿ ಇಸ್ಲಾಂ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

ಅಮೆರಿಕದ ಹಿತಾಸಕ್ತಿಯನ್ನು ಬಲವಾಗಿ ಸಂರಕ್ಷಿಸಲಾಗುವುದು ಎಂದು ಸೌದಿ ಅರೆಬಿಯಾ ಪ್ರವಾಸ ಆರಂಭಿಸುವ ಮುನ್ನ ಟ್ರಂಪ್ ಟ್ವೀಟ್ ಮಾಡಿದ್ದಾರೆ. ಎಂಟು ದಿನಗಳಾವಧಿಯ ಈ ಮಧ್ಯಪ್ರಾಚ್ಯ ಮತ್ತು ಯುರೋಪ್ ರಾಷ್ಟ್ರಗಳ ಪ್ರವಾಸ ಟ್ರಂಪ್ ಅವರಿಗೆದುರಾಗಿರುವ ಪ್ರಮುಖ ರಾಜತಾಂತ್ರಿಕ ಪರೀಕ್ಷೆಯಾಗಿದೆ. ಮಾಜಿ ಅಧ್ಯಕ್ಷ ಒಬಾಮಾ ಇರಾನ್ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರು ಎಂದು ಅರಬ್ ದೇಶಗಳು ಅನುಮಾನ ಹೊಂದಿದ್ದವು. ಆದರೆ ಟ್ರಂಪ್ ಇರಾನ್ ವಿರುದ್ಧ ಕಠಿಣ ನಿಲುವು ತಳೆಯುವ ನಿರೀಕ್ಷೆಯಿದೆ. ಕೊಲ್ಲಿ ಮಿತ್ರರಾಷ್ಟ್ರದ ಜೊತೆಗಿನ ತನ್ನ ತನ್ನ ಸಾಂಪ್ರದಾಯಿಕ ಸಂಬಂಧವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಈ ಪ್ರವಾಸದಲ್ಲಿ ಮಾನವ ಹಕ್ಕು ವಿಷಯದ ಬಗ್ಗೆ ಹೆಚ್ಚು ಗಮನ ನೀಡದೆ, ಹೊಸ ಶಸ್ತ್ರಾಸ್ತ್ರ ಒಪ್ಪಂದದ ಘೋಷಣೆಯನ್ನು ನಿರೀಕ್ಷಿಸಲಾಗಿದೆ.

  ಟ್ರಂಪ್ ಇರಾನ್ ಬಗ್ಗೆ ಕಠಿಣ ನಿಲುವು ತಳೆಯಲಿದ್ದಾರೆ . ಅಲ್ಲದೆ ಅವರು ನೀಡಲಿರುವ ಉಪನ್ಯಾಸದಲ್ಲಿ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕು ಕುರಿತು ಪ್ರಸ್ತಾವನೆ ಇರುವುದಿಲ್ಲ ಎಂದು ವಿದೇಶ ವ್ಯವಹಾರ ಸಮಿತಿಯ ಹಿರಿಯ ಸದಸ್ಯ ಫಿಲಿಪ್ ಗೋರ್ಡನ್ ತಿಳಿಸಿದ್ದಾರೆ. ಇರಾನ್ ಬೆಂಬಲಿತ ಲೆಬನಾನ್‌ನ ಬಂಡುಗೋರ ಮುಖಂಡ ಹೆಝ್‌ಬುಲ್ಲಾನನ್ನು 'ಕಪ್ಪುಪಟ್ಟಿ' ಗೆ ಸೇರಿಸಿರುವುದಾಗಿ ಅಮೆರಿಕ ಮತ್ತು ರಿಯಾದ್ ಹೊರಡಿಸಿದ ಜಂಟಿ ಘೋಷಣೆಯಲ್ಲಿ ತಿಳಿಸಲಾಗಿದೆ.

ಈ ಮಧ್ಯೆ, ರಿಯಾದ್‌ನ ನೈರುತ್ಯ ಪ್ರಾಂತ್ಯದಲ್ಲಿ ಯೆಮೆನ್ ಬಂಡುಗೋರರು ಉಡಾಯಿಸಿದ ಪ್ರಕ್ಷೇಪಕ ಕ್ಷಿಪಣಿಯನ್ನು ಹೊಡೆದುುಳಿಸಿರುವುದಾಗಿ ಸೌದಿ ಅರೆಬಿಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News