ವೈದ್ಯರ ಸೇವೆ ಗ್ರಾಮೀಣ ರೋಗಿಗಳಿಗೆ ಸಿಗುವಂತಾಗಲಿ: ಐವನ್

Update: 2017-05-20 14:59 GMT

ಮಂಗಳೂರು, ಮೇ 20: ವೈದ್ಯರ ಸೇವೆಯು ಗ್ರಾಮೀಣ ಮತ್ತು ಹಳ್ಳಿಗಳಲ್ಲಿರುವ ರೋಗಿಗಳಿಗೂ ಸಿಗುವಂತಾಗಬೇಕು ಎಂದು ವಿಧಾನಪರಿಷತ್ ಮುಖ್ಯಸಚೇತಕ ಐವನ್ ಡಿಸೋಜಾ ಹೇಳಿದ್ದಾರೆ.

ಅವರು ಮಂಗಳೂರು ಇನ್ಸ್‌ಟಿಟ್ಯೂಟ್ ಆಫ್ ಆನ್‌ಕಾಲಜಿ ಸ್ಪಶಾಲಿಟಿ ಕ್ಯಾನ್ಸರ್ ಆಸ್ಪತ್ರೆಯ 5ನೆ ವಾರ್ಷಿಕೋತ್ಸವದ ಅಂಗವಾಗಿ ಆಸ್ಪತ್ರೆಯ ಆವರಣದಲ್ಲಿ ಶನಿವಾರ ಹಮ್ಮಿಕೊಂಡ ‘ಒಂದು ಸಂಜೆ’ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳ ರೋಗಿಗಳಿಗೆ ವೈದ್ಯರ ಸೇವೆಯನ್ನು ಸಿಗಬೇಕೆಂಬ ಉದ್ದೇಶದಿಂದ ಕಳೆದ ಹಲವು ತಿಂಗಳುಗಳಿಂದ ನಾನು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇನೆ. ಈ ನಿಟ್ಟಿನಲ್ಲಿ ವೈದ್ಯರು ಕೂಡ ಮುತುವರ್ಜಿ ವಹಿಸಬೇಕೆಂದು ಸಲಹೆ ನೀಡಿದರು.

ಕ್ಯಾನ್ಸರ್ ಪೀಡಿತರ ನೋವು, ನಲಿವುಗಳಿಗೆ ಸ್ಪಂದಿಸುತ್ತಾ ಅವರ ಸೇವೆಯನ್ನು ಮಾಡಿ ಐದು ವರ್ಷಗಳನ್ನು ಕಳೆದಿರುವ ಆಸ್ಪತ್ರೆಯ ಸೇವೆ ಶ್ಲಾಘನೀಯ. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯನ್ನು ಹೊರತುಪಡಿಸಿದರೆ ಮಂಗಳೂರಿನ ಇನ್ಸ್‌ಟಿಟ್ಯೂಟ್ ಆಫ್ ಆನ್‌ಕಾಲಜಿ ಕ್ಯಾನ್ಸರ್ ಆಸ್ಪತ್ರೆ ಎರಡನೆ ಸ್ಥಾನದಲ್ಲಿದೆ. ಕ್ಯಾನ್ಸರ್ ಪೀಡಿತ ಹಲವು ರೋಗಿಗಳು ತನ್ನ ಬಳಿ ಬಂದು ವೈದ್ಯಕೀಯ ಚಿಕಿತ್ಸೆಗೆ ಸಹಾಯವನ್ನು ಯಾಚಿಸಿದ್ದಾರೆ. ಅವರಿಗೆ ಸ್ಪಂದಿಸಿ ಮುಖ್ಯಮಂತ್ರಿಯವರ ನಿಧಿಯಿಂದ ಸಹಾಯಧನವನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದೇನೆ. ಅಲ್ಲದೆ, ವೈದ್ಯಕೀಯ ಚಿಕಿತ್ಸೆಗೆ ಸರಕಾರ ಹಲವು ಯೋಜನೆಗಳನು ಪ್ರಕಟಿಸಿದ್ದು, ಅದರ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

ವೈದ್ಯರು ಮಾನವೀಯ ವೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದ ಐವನ್ ಡಿಸೋಜಾ ಅವರು, ಇದರಿಂದ ಸಮಾಜ ಸುಧಾರಣೆಯ ಜೊತೆಗೆ ವೈದ್ಯರ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಲೂ ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಹೃದ್ರೋಗ ತಜ್ಞ ಡಾ.ಎ.ಬಿ.ಶೆಟ್ಟಿ ವಹಿಸಿದ್ದರು. ಕರ್ಣಾಟಕ ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಗೂ ಮಂಗಳೂರು ಇನ್ಸ್‌ಟಿಟ್ಯೂಟ್ ಆಫ್ ಆನ್‌ಕಾಲಜಿ ಸ್ಪಶಾಲಿಟಿ ಕ್ಯಾನ್ಸರ್ ಆಸ್ಪತ್ರೆಯ ನೂತನ ಗೌರವಾಧ್ಯಕ್ಷ ಅನಂತಕೃಷ್ಣ , ನಿರ್ದೇಶಕರಾದ ಡಾ.ಅಲಿ ಕುಂಬ್ಳೆ, ಡಾ.ಯೂಸುಫ್ ಕುಂಬ್ಳೆ, ಡಾ.ಅಬ್ದುಲ್ ಹಮೀದ್, ಡಾ.ಮುಹಮ್ಮದ್ ಅರ್ಶದ್, ಡಾ.ಜಲಾಲುದ್ದೀನ್ ಅಕ್ಬರ್, ಡಾ.ಡಿ.ಸುರೇಶ್ ರಾವ್, ಡಾ.ಕೃಷ್ಣ ಪ್ರಸಾದ್, ಡಾ.ರೋಹನ್‌ಚಂದ್ರ ಗಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ.ಸನತ್ ಹೆಗ್ಡೆ ಸ್ವಾಗತಿಸಿದರು. ಪತ್ರಕರ್ತ ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News