ವೈದ್ಯರ ಮೇಲೆ ಹಲ್ಲೆ: ಮೇ 22ರಂದು ವೈದ್ಯರ ಮುಷ್ಕರ
ಮಂಗಳೂರು, ಮೇ 20: ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ಹಾಗೂ ಇತರ ವಿವಿಧ ವೈದ್ಯಕೀಯ ಸಂಘಟನೆಗಳ ಆಶ್ರಯದಲ್ಲಿ ಮೇ 22ರಂದು ಬೆಳಗ್ಗೆ 6 ಗಂಟೆಯಿಂದ 24 ಗಂಟೆಗಳ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಶನ್‌ನ ನಿಯೋಜಿತ ಅಧ್ಯಕ್ಷ ಡಾ.ಕೆ.ಆರ್.ಕಾಮತ್ ತಿಳಿಸಿದ್ದಾರೆ.
ನಗರದ ಐಎಂಎ ಸಭಾಂಗಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಷ್ಕರದ ಹಿನ್ನೆಲೆಯಲ್ಲಿ ಅಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಲ್ಲೆಗಲ್ಲಿ ತುರ್ತು ಚಿಕಿತ್ಸೆ ಹಾಗೂ ತುರ್ತು ವೈದ್ಯಕೀಯ ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲಾ ವೈದ್ಯಕೀಯ ಸೇವೆಗಳು ಸ್ಥಗಿತಗೊಳ್ಳಲಿದೆ ಎಂದರು.
ಮೇ 22ರಂದು ಬೆಳಗ್ಗೆ 10 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ವೈದ್ಯರು ಕಾಲ್ನಡಿಗೆಯಲ್ಲಿ ಮೆರವಣಿಗೆ ಹೊರಡಲಿದ್ದು, ನೆಹರೂ ಮೈದಾನದಲ್ಲಿ ಸಮಾವೇಶಗೊಳ್ಳಲಿದೆ ಎಂದರು.
ಮೇ 15ರಂದು ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಧುಮೇಹ ಕಾಯಿಲೆ ರೋಗಿಯು ಮೃತಪಟ್ಟಿದ್ದರಿಂದ ವಿಷಯವನ್ನು ರೋಗಿಗಳ ಸಂಬಂಧಿಕರಿಗೆ ತಿಳಿಸಲು ಹೋಗಿದ್ದ ವೈದ್ಯರನ್ನು ಎಳೆದು ಥಳಿಸಿ ಹಲ್ಲೆ ನಡೆಸಲಾಗಿದೆ. ರಕ್ಷಣೆಗೆ ಬಂದ ಶುಶ್ರೂಷಕಿಯ ಮೇಲೂ ಹಲ್ಲೆ ಮಾಡಿ, ವೈದ್ಯರನ್ನು ಅಪಹರಣ ಮಾಡಲಾಗಿದೆ ಎಂದು ಡಾ.ಕೆ.ಆರ್.ಕಾಮತ್ ವಿಷಾದಿಸಿದರು.
ಕಳೆದ ಕೆಲವು ತಿಂಗಳುಗಳಿಂದ ವೈದ್ಯರ ಮೇಲೆ ಕೆಲವೆಡೆ ಹಲ್ಲೆಗಳು ನಡೆದಿವೆ. ಇದು ಮುಂದುವರಿಸಬಾರದು. ಈ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಬಂಧಿತ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ತಪ್ಪಿಸಿಕೊಂಡಿರುವ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಈ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಎಂಸಿಯ ಕಾರ್ಯದರ್ಶಿ ಡಾ.ಅನಂತರ ಪ್ರಸಾದ್ ರಾವ್, ಸದಸ್ಯ ಡಾ.ಸಚಿದಾನಂದ, ಪಿಡಿಯಾಟ್ರಿಕ್ ಅಸೋಸಿಯೇಶನ್‌ನ ನಿಯೋಜಿತ ಅಧ್ಯಕ್ಷ ಡಾ.ಸಂತೋಷ್ ಸೋನ್ಸ್, ಇಂಡಿಯನ್ ಡೆಂಟಲ್ ಅಸೋಸಿಯೇಶನ್‌ನ ಡಾ.ಭರತ್ ಶೆಟ್ಟಿ, ಫ್ಯಾಮಿಲಿ ಡಾಕ್ಟರ್ಸ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಡಾ. ಜಿ.ಕೆ.ಭಟ್, ಡಾ.ಸುಧೀರ್ ಹೆಗ್ಡೆ, ಡಾ.ಗುರುಪ್ರಸಾದ್ ಭಟ್, ಡಾ.ಸತೀಶ್ ಭಟ್, ಡಾ.ಇರ್ಫಾನ್, ಡಾ.ದೀಪಕ್ ರೈ, ಡಾ. ನಾಗೇಶ್ ಅತ್ತಾವರ ಮೊದಲಾದವರು ಉಪಸ್ಥಿತರಿದ್ದರು.