ಘನತ್ಯಾಜ್ಯ ನಿರ್ವಹಣೆ ಸಮಸ್ಯೆಗೆ ಮನೆಗಳಲ್ಲಿಯೇ ಪರಿಹಾರ : ‘ಸ್ವಚ್ಛತೆಯೊಂದಿಗೆ ಅನುಸಂಧಾನ’ ಅಭಿಯಾನದಲ್ಲಿ ಜಿಲ್ಲಾಧಿಕಾರಿ

Update: 2017-05-20 15:18 GMT

ಉಡುಪಿ, ಮೇ 20: ಮನೆಗಳಲ್ಲಿ ಉತ್ಪತ್ತಿಯಾಗುವ ಜೈವಿಕ ತ್ಯಾಜ್ಯವನ್ನು ಮೂಲದಲ್ಲೇ ವಿಲೇವಾರಿ ಮಾಡಿದರೆ ಗ್ರಾಪಂ ವ್ಯಾಪ್ತಿಯಲ್ಲಿ ಘನ್ಯತ್ಯಾಜ್ಯ ನಿರ್ವ ಹಣೆಯ ಸಮಸ್ಯೆ ಉಂಟಾಗಲು ಸಾಧ್ಯವಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಭಿಪ್ರಾಯ ಪಟ್ಟಿದ್ದಾರೆ.

ಜೇಸಿಐ ಕಲ್ಯಾಣಪುರದ ಆಶ್ರಯದಲ್ಲಿ ಸಂತೆಕಟ್ಟೆ ನೇಜಾರಿನ ರಾಜೀವ ನಗರದಲ್ಲಿ ಶನಿವಾರ ಆಯೋಜಿಸಲಾದ ‘ಸ್ವಚ್ಛತೆಯೊಂದಿಗೆ ಅನುಸಂಧಾನ’ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ದುರ್ವಾಸನೆಯ ಕಾರಣದಿಂದ ಪ್ರಸ್ತುತ ಹೆಚ್ಚಿನ ಪಂಚಾಯತ್‌ಗಳಲ್ಲಿ ದೊಡ್ಡ ಸಂಸ್ಕರಣ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತವಾಗುತ್ತಿದೆ. ಆದರೆ ಮನೆಯ ಕಸ ವನ್ನು ಪೈಪ್‌ನಲ್ಲಿ ಹಾಕಿ ಕಾಂಪೋಸ್ಟ್ ಮಾಡುವುದರಿಂದ ವಾಸನೆ ಬರುವುದಿಲ್ಲ. ಮಾತ್ರವಲ್ಲ ಇದರಿಂದ ಸಿಗುವ ಹೆಚ್ಚುವರಿ ಗೊಬ್ಬರ ಮಾರಾಟ ಆದಾಯವನ್ನೂ ಪಡೆಯಬಹುದು ಎಂದು ಅವರು ಹೇಳಿದರು.

 ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಕಾಂಪೋಸ್ಟ್ ಪೈಪ್ ವಿತರಿಸಿ, ಬಹುತೇಕ ಎಲ್ಲಾ ಕಡೆಗಳಲ್ಲಿ ತ್ಯಾಜ್ಯ ವಿಲೇವಾರಿ ಗಂಭೀರ ಸಮಸ್ಯೆ ಯಾಗಿದೆ. ಹೊರಗಡೆ ಕಸ ಎಸೆಯುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪರಿಸರ ಸಂರಕ್ಷಣೆಗೆ ಹಲವು ಕಾಯ್ದೆಗಳು ಜಾರಿಯಲ್ಲಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಪರಿಸರ ರಕ್ಷಣೆ ಆಗುತ್ತಿಲ್ಲ ಎಂದು ತಿಳಿಸಿದರು.

ಮಾಜಿ ತಾಪಂ ಉಪಾಧ್ಯಕ್ಷೆ ವೆರೋನಿಕಾ ಕರ್ನೇಲಿಯೋ ಕಾಂಪೋಸ್ಟ್ ಪೈಪ್ ಘಟಕಕ್ಕೆ ಚಾಲನೆ ನೀಡಿದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯಕರ ಸುವರ್ಣ ಮಾಹಿತಿ ಪತ್ರ ಬಿಡುಗಡೆ ಮಾಡಿದರು. ಸ್ವಚ್ಛ ಭಾರತ ಅಭಿಯಾನದ ಜಿಲ್ಲಾ ಸಂಯೋಜಕ ಸುಧೀರ್ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಜೇಸಿಐ ಕಲ್ಯಾಣಪುರದ ಅಧ್ಯಕ್ಷ ಪ್ರಶಾಂತ ಆಚಾರ್ಯ ವಹಿಸಿದ್ದರು.

ಕಲ್ಯಾಣಪುರ ಗ್ರಾಪಂ ಅಧ್ಯಕ್ಷೆ ಪುಷ್ಪಾ ಕೋಟ್ಯಾನ್, ಸದಸ್ಯ ನಾಗರಾಜ್, ಮಾಹಿ ಅಧ್ಯಕ್ಷ ಸತೀಶ್ ನಾಯ್ಕಾ, ನಗರಸಭೆ ಸದಸ್ಯ ಚಂದ್ರಕಾಂತ, ಜೇಸಿಐ ಕಾರ್ಯದರ್ಶಿ ನಿತ್ಯಾನಂದ, ಜೇಸಿರೆಟ್ ಅಧ್ಯಕ್ಷೆ ದೇವಿಕಾ ಪ್ರಶಾಂತ್, ಕಾರ್ಯ ಕ್ರಮ ನಿರ್ದೇಶಕ ಜೋಸೆಫ್ ರೆಬೆಲ್ಲೊ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News