ಕಾಸರಗೋಡು ಕೋಟೆ ಮಾರಾಟ ಅವ್ಯವಹಾರ: 15 ಮಂದಿ ತಪ್ಪಿತಸ್ಥರು

Update: 2017-05-20 15:40 GMT

ಕಾಸರಗೋಡು, ಮೇ 20:  ಕಾಸರಗೋಡು ಕೋಟೆ ಮಾರಾಟ ಅವ್ಯವಹಾರದ ಬಗ್ಗೆ  ಮಾಜಿ ಭೂ ಕಂದಾಯ ಆಯುಕ್ತ ಟಿ.ಒ.   ಸೂರಜ್ ಸೇರಿದಂತೆ  15 ಮಂದಿ ತಪ್ಪಿತಸ್ಥರೆಂದು ವಿಜಿಲೆನ್ಸ್ ವರದಿ ಸಲ್ಲಿಸಿದೆ.

ಪ್ರಕರಣದಲ್ಲಿ  ಈಗ ಇರುವ 12 ಮಂದಿಯನ್ನು  ವಿಚಾರಣೆ ನಡೆಸುವಂತೆ  ಅನುಮತಿ ಕೋರಿ  ಡಿವೈ.ಎಸ್.ಪಿಕೆ  ವಿ. ರಘುರಾಮನ್  ವಿಜಿಲೆನ್ಸ್  ನಿರ್ದೇಶಕರಿಗೆ ವರದಿ ಸಲ್ಲಿಸಿದ್ದಾರೆ.
 ನಕಲಿ ದಾಖಲೆ ತಯಾರಿಸಿ ಐತಿಹಾಸಿಕ ಕೋಟೆ ಯನ್ನು ಹಾಗೂ ಅದಕ್ಕೆ ಸಂಬಂಧಿಸಿದ ಸ್ಥಳವನ್ನು ಖಾಸಗಿ ವ್ಯಕ್ತಿಗಳು ಮಾರಾಟ ಮಾಡಿದ್ದು,  ಇದಕ್ಕೆ  ಕಂದಾಯ ಆಯುಕ್ತ  ಹಾಗೂ ಇಲಾಖಾಧಿಕಾರಿಗಳು  ಕೈಜೋಡಿಸಿದ್ದಾರೆ ಎಂದು  ವರದಿಯಲ್ಲಿ ಉಲ್ಲೇಖಿಸಿದೆ.

ಭೂ ಕಂದಾಯ ಆಯುಕ್ತರಾಗಿದ್ದ  ಸೂರಜ್ ಅಲ್ಲದೆ  ತಹಶೀಲ್ದಾರ್  ಚನಿಯಪ್ಪ, ಉಪನೋಂದಾವಣಾಧಿಕಾರಿ ರೋಬಿನ್  ಡಿಸೋಜ,  ಸ್ಥಳ ಖರೀದಿಸಿದ ನಗರಸಭಾ ಮಾಜಿ  ಅಧ್ಯಕ್ಷ  ಎಸ್.ಜೆ. ಪ್ರಸಾದ್, ರಾಜಕೀಯ ಮುಖಂಡ ಸಜಿ ಸೆಬಾಸ್ಟಿಯನ್, ಭೂಮಿ ಮಾರಾಟ ಮಾಡಿದ್ದ  ಮಂಗಳೂರಿನ ಆನಂದ ರಾಮ್,  ದೇವಿದಾಸ್ , ಚಂದ್ರವಾರ್ಕರ್, ಜೆ .ಅನೂಪ್,  ಅಶ್ವಿನ್ ಜೆ . ಚಂದ್ರವಾರ್ಕರ್,  ಮಂಜುಳಾ  ಮೊದಲಾದವರ   ವಿಚಾರಣೆ ನಡೆಸುವಂತೆ  ವಿಜಿಲೆನ್ಸ್ ವರದಿಯಲ್ಲಿ ಉಲ್ಲೇಖಿಸಿದೆ.

ಸ್ಥಳ ಮಾರಾಟ   ಮಾಡಿದ್ದ  ಮೂರು ಮಂದಿ ಈ ಅವಧಿಯಲ್ಲಿ ಮೃತಪಟ್ಟಿದ್ದಾರೆ. ಇದರಿಂದ 15  ಮಂದಿಯಲ್ಲಿ 12 ಮಂದಿ ವಿಚಾರಣೆ ಎದುರಿಸುವಂತೆ  ವಿಜಿಲೆನ್ಸ್  ವರದಿಯಲ್ಲಿ ಶಿಫಾರಸು ಮಾಡಿದೆ .

ಸ್ಥಳ  ಸರಕಾರದ್ದೆಂದು  ಲಾಂಡ್ ಅಪಲೇಟ್  ಟ್ರಿಬ್ಯೂನಲ್ , ಹೈಕೋರ್ಟ್  ಸ್ಪಷ್ಟಪಡಿಸಿದ್ದರೂ ಖಾಸಗಿ ವ್ಯಕ್ತಿಗಳಿಗೆ ಮಾರಾಟ  ಮಾಡಲು  ಅಂದು ಕಂದಾಯ ಆಯುಕ್ತರಾಗಿದ್ದ  ಟಿ.ಒ. ಸೂರಜ್  ಆದೇಶ ನೀಡಿದ್ದು, ಇದರ ಹಿಂದೆ ಷಡ್ಯಂತ್ರ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಸ್ಥಳದ  ದಾಖಲೆಯಾಗಿ  ಚಂದ್ರವಾರ್ಕರ್  ಕುಟುಂಬ  ಹಾಜರುಪಡಿಸಿದ  ಹಕ್ಕುಪತ್ರ  ನಕಲಿ  ಎಂದು ಪತ್ತೆ ಹಚ್ಚಲಾಗಿದೆ.
ಹಕ್ಕುಪತ್ರದ  ಮೂಲ ಪತ್ತೆಹಚ್ಚಲು  ವಿಜೆಲೆನ್ಸ್ ಗೆ ಸಾಧ್ಯವಾಗಿಲ್ಲ .  ಬ್ರಿಟಿಷರ ಕಾಲದಲ್ಲೂ  ಇಂತಹ ದಾಖಲೆ ಇರುವ ಬಗ್ಗೆ  ಮಾಹಿತಿ ಇಲ್ಲ ವೆನ್ನಲಾಗಿದೆ .
ಬ್ರಿಟಿಷರ ಕಾಲಾವಧಿಯಲ್ಲಿ  ಕೋಟೆಯ ಕಾವಲುಗಾರರಾಗಿದ್ದ ವ್ಯಕ್ತಿಗೆ ಕೋಟೆ  ಸಮೀಪ  ಗುತ್ತಿಗೆ ಆಗಿ  ನೀಡಿದ ಆದೇಶದ  ಪ್ರತಿಯನ್ನು ನಕಲಿ ದಾಖಲೆ ತಯಾರಿಸಿ ನೋಂದಾವಣೆ ಮಾಡಿ ಮಾರಾಟ ಮಾಡಿರುವುದಾಗಿ ವಿಜಿಲೆನ್ಸ್  ಪ್ರಕರಣ ದಾಖಲಿಸಿಕೊಂಡಿದೆ.
ಸುಮಾರು 500 ವರ್ಷಗಳ ಪುರಾತನ ಕಾಸರಗೋಡು ಕೋಟೆ  ಮಾರಾಟ 2015 ರ ಜುಲೈ ತಿಂಗಳಲ್ಲಿ  ಬೆಳಕಿಗೆ ಬಂದಿತ್ತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News