ವಿಶ್ವದ ಅತ್ಯಂತ ಮಾರಣಾಂತಿಕ ಹವಾಮಾನ ವೈಪರೀತ್ಯಗಳಲ್ಲಿ ಸೇರಿದ 1888ರಲ್ಲಿ ಭಾರತದಲ್ಲಿ ಬಿದ್ದಿದ್ದ ಆಲಿಕಲ್ಲು ಮಳೆ

Update: 2017-05-20 16:00 GMT

ವಿಶ್ವಸಂಸ್ಥೆ,ಮೇ 20: 1888ರಲ್ಲಿ ಭಾರತದಲ್ಲಿ ಬಿದ್ದಿದ್ದ ಆಲಿಕಲ್ಲು ಮಳೆಯನ್ನು ವಿಶ್ವದ ಸಾರ್ವಕಾಲಿಕ ಅತ್ಯಂತ ಮಾರಣಾಂತಿಕ ಹವಾಮಾನ ವೈಪರೀತ್ಯ ಘಟನೆಗಳಲ್ಲಿ ಒಂದು ಎಂದು ವಿಶ್ವಸಂಸ್ಥೆಯ ಹವಮಾನ ಏಜೆನ್ಸಿಯು ಗುರುತಿಸಿದೆ.

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಸುರಿದಿದ್ದ ಆ ಭಾರೀ ಆಲಿಕಲ್ಲು ಮಳೆಯಲ್ಲಿ 246 ಜನರು ಸಾವನ್ನಪ್ಪಿದ್ದರು.

 ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಹವಾಮಾನ ಏಜೆನ್ಸಿಯು ತನ್ನ ವ್ಯಾಪ್ತಿಯನ್ನು ತಾಪಮಾನ ಮತ್ತು ಹವಾಮಾನ ದಾಖಲೆಗಳಿಂದ ವಿಶೇಷ ಘಟನೆಗಳ ಪರಿಣಾಮಗಳಿಗೆ ವಿಸ್ತರಿಸಿದೆ. ಇಂತಹ ಐದು ಘಟನೆಗಳನ್ನು ಅದು ಪ್ರಸ್ತಾಪಿಸಿದ್ದು, ಉಷ್ಣ ಅಥವಾ ಶೀತ ಮಾರುತಗಳು,ಬರ ಮತ್ತು ಪ್ರವಾಹ ಇವುಗಳಲ್ಲಿ ಸೇರಿಲ್ಲ.

1970ರಲ್ಲಿ ಆಗಿನ ಪೂರ್ವ ಪಾಕಿಸ್ಥಾನದ ಮೂಲಕ ಹಾದು ಹೋಗಿದ್ದ ಚಂಡಮಾರುತ ಅತ್ಯಂತ ಹೆಚ್ಚು ಅಂದರೆ ಅಂದಾಜು 30,000 ಜೀವಗಳನ್ನು ಬಲಿ ಪಡೆದಿದ್ದ ಅತ್ಯಂತ ಮಾರಣಾಂತಿಕ ಹವಾಮಾನ ವೈಪರೀತ್ಯದ ಘಟನೆಯಾಗಿತ್ತು ಎಂದು ಏಜೆನ್ಸಿಯು ಹೇಳಿದೆ.

1999ರಲ್ಲಿ ಬಾಂಗ್ಲಾದೇಶದಲ್ಲಿ ಅಂದಾಜು 1,300 ಜನರ ಸಾವಿಗೆ ಕಾರಣವಾಗಿದ್ದ ಸುಂಟರಗಾಳಿ,1994ರಲ್ಲಿ ಈಜಿಪ್ತ್‌ನಲ್ಲಿ ತೈಲ ಟ್ಯಾಂಕರ್‌ಗೆ ಸಿಡಿಲು ಬಡಿದು 469 ಜನರು ಸಾವನ್ನಪ್ಪಿದ್ದು ಮತ್ತು ಆಗಿನ ರೊಡೇಶಿಯಾದಲ್ಲಿ ಗುಡಿಸಲೊಂದಕ್ಕೆ ಒಂದೇ ಸಿಡಿಲು ಬಡಿದು 21 ಜನರು ಸಾವನ್ನಪ್ಪಿದ್ದು...ಇವು ಈ ಏಜೆನ್ಸಿಯು ಗುರುತಿಸಿರುವ ಇತರ ಮೂರು ಅತ್ಯಂತ ಮಾರಣಾಂತಿಕ ಹವಾಮಾನ ವೈಪರೀತ್ಯ ಘಟನೆಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News