ಬಾಬರಿ ಮಸೀದಿ ಧ್ವಂಸಕ್ಕೆ ನರಸಿಂಹ ರಾವ್ ಸರ್ಕಾರದಿಂದ ಬೆಂಬಲ ಇತ್ತು: ಬಿಜೆಪಿ ಮಾಜಿ ಸಂಸದ

Update: 2017-05-21 03:44 GMT

ಲಕ್ನೋ, ಮೇ 21: ಬಾಬರಿ ಮಸೀದಿ ಧ್ವಂಸಕ್ಕೆ ಅಂದಿನ ಪಿ.ವಿ.ನರಸಿಂಹ ರಾವ್ ಸರ್ಕಾರದಿಂದ ಬೆಂಬಲ ಇತ್ತು ಎಂದು ಮಾಜಿ ಬಿಜೆಪಿ ಸಂಸದ ಆರ್.ವಿ.ವೇದಾಂತಿ ಶನಿವಾರ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಬಹು ವಿವಾದಿತ 1992ರ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ವೇದಾಂತಿ ಈ ಹೇಳಿಕೆ ನೀಡಿದ್ದಾರೆ.

ಬಾಬರಿ ಮಸೀದಿ ಧ್ವಂಸ ಪ್ರಕ್ರಿಯೆ ಸುಲಲಿತವಾಗಿ ನಡೆಯಲು ಮತ್ತು ಯಾವುದೇ ಅಡ್ಡಿ ಆತಂಕ ಎದುರಾಗದಂತೆ ಮಾಡುವ ಸಲುವಾಗಿ, ಯಾವುದೇ ಭದ್ರತಾ ಪಡೆಗಳನ್ನು ತಕ್ಷಣಕ್ಕೆ ಕಳುಹಿಸಬಾರದು ಎಂಬ ನಮ್ಮ ಮನವಿಗೆ ಅಂದಿನ ಪ್ರಧಾನಿ ನರಸಿಂಹರಾವ್ ಒಪ್ಪಿಕೊಂಡಿದ್ದರು ಎಂದು ವೇದಾಂತಿ ಸ್ಪಷ್ಟಪಡಿಸಿದ್ದಾರೆ.

"1992ರ ಡಿಸೆಂಬರ್ 5ರ ರಾತ್ರಿ 11 ಗಂಟೆ ಸುಮಾರಿಗೆ ಪ್ರಧಾನಿ ನರಸಿಂಹರಾವ್ ನನಗೆ ಕರೆ ಮಾಡಿ, ನಾಳೆ ಏನಾಗುತ್ತದೆ ಎಂದು ಕೇಳಿದ್ದರು. ಮಸೀದಿಯನ್ನು ಧ್ವಂಸಗೊಳಿಸುವ ನಿರ್ಧಾರದಿಂದ ಕರಸೇವಕರು ಹಿಂದಕ್ಕೆ ಹೋಗುವುದಿಲ್ಲ ಎಂದು ನಾನು ಸ್ಪಷ್ಟಪಡಿಸಿದ್ದೆ. ಆಗ ನಿಮಗೆ ಏನು ಸಹಕಾರ ಬೇಕು ಎಂದು ಕೇಳಿದರು. ಕೇಂದ್ರದ ಪಡೆಗಳು ಆಗಮಿಸದಿದ್ದರೆ, ನಾವು ಅದನ್ನು ಧ್ವಂಸ ಮಾಡಿಯೇ ಮಾಡುತ್ತೇವೆ ಎಂದು ಹೇಳಿದೆ. ಅದಕ್ಕೆ ನರಸಿಂಹರಾವ್ ಒಪ್ಪಿದರು" ಎಂದು ವೇದಾಂತಿ ವಿವರಿಸಿದರು.

ಎಲ್.ಕೆ.ಅಡ್ವಾಣಿ, ಉಮಾಭಾರತಿ, ಮುರಳಿಮನೋಹರ ಜೋಶಿಯವರು ಈ ಪಿತೂರಿಯಲ್ಲಿ ಶಾಮೀಲಾಗಿರುವ ಬಗ್ಗೆ ಪ್ರಶ್ನಿಸಿದಾಗ, "ಧ್ವಂಸ ಪ್ರಕ್ರಿಯೆ ಆರಂಭವಾದ ಬಳಿಕ ಅವರು ಸ್ಥಳಕ್ಕೆ ಆಗಮಿಸಿದರು. ಆದರೆ ಅವರು ಕರಸೇವಕರನ್ನು ಮಸೀದಿಯಿಂದ ಕೆಳಕ್ಕೆ ಬರುವಂತೆ ಕೋರಿದ್ದರು" ಎಂದು ವೇದಾಂತಿ ಹೇಳಿದ್ದಾರೆ. ಆರೋಪಿಗಳಿಗೆ 20 ಸಾವಿರ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಆಧಾರದಲ್ಲಿ ಜಾಮೀನು ನೀಡಲಾಗಿದ್ದು, ಪ್ರಕರಣದ ಮೂಂದಿನ ವಿಚಾರಣೆ ಮೇ 22ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News