×
Ad

ಬಿಜೆಪಿಯೊಂದಿಗೆ ಮೈತ್ರಿ: ತಮಿಳುನಾಡಿನಲ್ಲಿ ಬಿರುಗಾಳಿ ಎಬ್ಬಿಸಿದ ಪನ್ನೀರ್‌ಸೆಲ್ವಂ ಟ್ವೀಟ್

Update: 2017-05-21 10:47 IST

 ಚೆನ್ನೈ, ಮೇ 21: ಸ್ಥಳೀಯ ಸಂಸ್ಥೆಗಳ ಚುನಾವಣೆಯ ವೇಳಾಪಟ್ಟಿ ಘೋಷಣೆಯಾದ ಬಳಿಕ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಾವು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಎಐಎಡಿಎಂಕೆ ಪುರಚಿ ತಲೈವಿ(ಅಮ್ಮಾ) ಬಣದ ಮುಖಂಡ ಒ. ಪನ್ನೀರ್‌ಸೆಲ್ವಂ ಮಾಡಿದ್ದ ಟ್ವೀಟ್ ತಮಿಳುನಾಡಿನಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿತ್ತು.

ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಗಮನಿಸಿದ ಒ. ಪನ್ನೀರ್ ಸೆಲ್ವಂ ಬಣ ತಕ್ಷಣವೇ ಟ್ವಿಟರ್‌ನಲ್ಲಿನ ಶಬ್ದಗಳನ್ನು ಅಳಿಸಿಹಾಕಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕವಷ್ಟೇ ಯಾವುದೇ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಕುರಿತಂತೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿತು.

ಪನ್ನೀರ್‌ಸೆಲ್ವಂ ಇತ್ತೀಚೆಗಷ್ಟೇ ಹೊಸದಿಲ್ಲಿಗೆ ತೆೆರಳಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ತಮಿಳುನಾಡಿನ ರಾಜಕೀಯ ವಿಷಯದ ಬಗ್ಗೆ ಚರ್ಚಿಸಿದ್ದರು. ಆ ಬಳಿಕ ಈ ಬೆಳವಣಿಗೆ ನಡೆದಿದೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಈ ವರ್ಷ ಫೆಬ್ರವರಿಯಲ್ಲಿ ಎಐಎಎಡಿಎಂಕೆ ಮುಖ್ಯಸ್ಥೆ ವಿ.ಕೆ.ಶಶಿಕಲಾ ವಿರುದ್ಧ ಬಂಡಾಯ ಎದ್ದಿದ್ದರು. ತನ್ನನ್ನು ಬಲವಂತವಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದು ಸೆಲ್ವಂ ಆರೋಪಿಸಿದ್ದರು.

ಎ.21 ರಂದು ನಿಗದಿಯಾಗಿದ್ದ ಚೆನ್ನೈನ ಆರ್‌ಕೆ ನಗರ ಉಪ ಚುನಾವಣೆಗೆ ಒಪಿಎಸ್ ಬಣ ಇ. ಮಧುಸೂದನ್‌ರನ್ನು ಕಣಕ್ಕಿಳಿಸಿತ್ತು. ಎಐಎಡಿಎಂಕೆಯ ಮತ್ತೊಂದು ಬಣ ಪಕ್ಷದ ಪ್ರಧಾನ ಕಾರ್ಯದರ್ಶಿ ಟಿಟಿ ವಿ ದಿನಕರನ್‌ರನ್ನು ಕಣಕ್ಕಿಳಿಸಿತ್ತು.

ಆರ್‌ಕೆ ನಗರ ಉಪ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಹಣಬಲ ಬಳಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದ ಕಾರಣ ಉಪ ಚುನಾವಣೆಯನ್ನು ಚುನಾವಣಾ ಆಯೋಗ ರದ್ದುಪಡಿಸಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News