ಉರುಳಿ ಬಿದ್ದ ಬಸ್, ಓರ್ವ ಸಾವು, 35 ಜನರಿಗೆ ಗಾಯ
Update: 2017-05-21 12:02 IST
ಮುಂಬೈ, ಮೇ 21: ಉಪನಗರ ದಾದರ್(ಪೂರ್ವ)ನಲ್ಲಿ ರವಿವಾರ ಬೆಳಗ್ಗಿನ ಜಾವ 4 ಗಂಟೆಗೆ ಖಾಸಗಿ ಲಕ್ಸುರಿ ಬಸ್‌ವೊಂದು ಉರುಳಿ ಬಿದ್ದ ಪರಿಣಾಮ 35ರ ಪ್ರಾಯದ ಪ್ರಯಾಣಿಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದರೆ, ಇತರ 35 ಮಂದಿಗೆ ಗಾಯವಾಗಿದೆ.
ರತ್ನಗಿರಿಯಿಂದ ಬೊರಿವಿಲಿಗೆ ತೆರಳುತ್ತಿದ್ದ ಖಾಸಗಿ ಬಸ್ ಯು-ಟರ್ನ್ ತೆಗೆದುಕೊಳ್ಳುವ ವೇಳೆ ಡಿವೈಡರ್‌ಗೆ ಢಿಕ್ಕಿಯಾಗಿ ಉರುಳಿ ಬಿದ್ದಿದೆ.
‘‘ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಬೊರಿವಿಲಿಯ ಸಾಯಿನಾಥ್ ಭಾಲೇಕರ್ ಎಂದು ಗುರುತಿಸಲಾಗಿದೆ. ಭಾಲೇಕರ್ ಚಾಲಕನ ಪಕ್ಕದ ಆಸನದಲ್ಲೇ ಕುಳಿತ್ತಿದ್ದರು. ಬಸ್ ಉರುಳಿ ಬಿದ್ದಾಗ ಭಾಲೇಕರ್ ಕಿಟಕಿಯಿಂದ ಹೊರಬಿದ್ದು, ಚಕ್ರದಡಿಗೆ ಸಿಲುಕಿದ್ದರು. ಚಾಲಕ ಸಹಿತ ಇತರ 35 ಮಂದಿಗೆ ಗಾಯವಾಗಿದೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ನಿರ್ಲಕ್ಷ ಚಾಲನೆಯಿಂದ ವ್ಯಕ್ತಿಯ ಸಾವಿಗೆ ಕಾರಣವಾದ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’’ ಎಂದು ಮಾಟುಂಗಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಬಿಎಂ ಕಾಕಡ್ ತಿಳಿಸಿದ್ದಾರೆ.