ಪ್ರಧಾನಿ ಮೋದಿಯ ಗುಜರಾತ್ ಭೇಟಿಗೆ ಮುನ್ನ ಕೇಶಮುಂಡನ ಮಾಡಿಕೊಂಡ ಹಾರ್ದಿಕ್ ಪಟೇಲ ಮತ್ತು ಪಾಟಿದಾರ್ ಯುವಕರು
ಅಹ್ಮದಾಬಾದ್,ಮೇ 21: ತವರು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನಗಳ ಭೇಟಿಯ ಮುನ್ನಾದಿನವಾದ ರವಿವಾರ ಪಟೇಲ ಮೀಸಲಾತಿ ಚಳವಳಿಯ ನಾಯಕ ಹಾರ್ದಿಕ್ ಪಟೇಲ ಮತ್ತು ಪಾಟಿದಾರ್ ಸಮುದಾಯದ 50 ಯುವಕರು ತಮ್ಮ ನ್ಯಾಯಯಾತ್ರೆಗೆ ಚಾಲನೆ ನೀಡಲು ತಲೆಗಳನ್ನು ಬೋಳಿಸಿಕೊಂಡರು.
ಎರಡು ದಿನಗಳ ನ್ಯಾಯಯಾತ್ರೆ ಬೋಟಾದ್‌ನ ಲಾಥಿಡಾಲ್‌ನಿಂದ ಆರಂಭ ಗೊಂಡಿದ್ದು, ಸೋಮವಾರ ಭಾವನಗರದಲ್ಲಿ ಅಂತ್ಯಗೊಳ್ಳುವ ಮುನ್ನ 51 ಗ್ರಾಮಗಳನ್ನು ಹಾದು ಹೋಗಲಿದೆ. ಪ್ರಧಾನಿ ಹಿಂದಿನ ಬಾರಿ ಗುಜರಾತ್‌ಗೆ ಭೇಟಿ ನೀಡಿದ್ದಾಗ ಬೋಟಾದ್‌ನಲ್ಲಿ ನೀರಾವರಿ ಯೋಜನೆಯೊಂದನ್ನು ಉದ್ಘಾಟಿಸಿದ್ದರು.
2015ರಲ್ಲಿ 13 ಯುವಕರ ಸಾವಿಗೆ ಕಾರಣವಾಗಿದ್ದ, ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯಗಳ ವಿರುದ್ಧ ನ್ಯಾಯಕ್ಕಾಗಿ ನಮ್ಮ ಬೇಡಿಕೆಗಳಿಗೆ ಒತ್ತು ನೀಡಲು ನ್ಯಾಯಯಾತ್ರಾ ಹಮ್ಮಿಕೊಳ್ಳಲಾಗಿದೆ ಎಂದು ಪಟೇಲ ತಿಳಿಸಿದರು.
ರಾಜ್ಯದಲ್ಲಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರಭಾವಿ ಸಮುದಾಯವಾಗಿರುವ ಹಾಗೂ ಕಳೆದ ಮೂರು ದಶಕಗಳಿಂದಲೂ ಬಿಜೆಪಿಯ ಬೆಂಬಲಿಗರಾಗಿರುವ ಪಾಟಿದಾರ್ ಗಳು ಒಬಿಸಿ ಸ್ಥಾನಮಾನಕ್ಕಾಗಿ ರಾಜ್ಯ ಸರಕಾರದ ವಿರುದ್ಧ ಸಮರ ಸಾರಿದ್ದಾರೆ.