ಗೋಳಿತ್ತೊಟ್ಟು: ಲಾರಿಗಳ ಮುಖಾಮುಖಿ ಢಿಕ್ಕಿ- ಇಬ್ಬರು ಮೃತ್ಯು
ಉಪ್ಪಿನಂಗಡಿ, ಮೇ 21: ಎರಡು ಈಚರ್ ಲಾರಿಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಲಾರಿ ಚಾಲಕರಿಬ್ಬರು ಮೃತಪಟ್ಟ ಘಟನೆ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗೋಳಿತ್ತೊಟ್ಟುವಿನಲ್ಲಿ ಸಂಭವಿಸಿದೆ.
ಓರ್ವ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇನ್ನೋರ್ವ ಚಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಗಿ ತಿಳಿದುಬಂದಿದೆ.
ಶಿಕಾರಿಪುರ ನಿವಾಸಿ ಕಲ್ಲಪ್ಪ ಎಂಬವರ ಪುತ್ರ ಮಂಜುನಾಥ (27) ಸ್ಥಳದಲ್ಲೇ ಮೃತ ಚಾಲಕ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಚಾಲಕನನ್ನು ಬೆಂಗಳೂರು ನೆಲಮಂಗಳ ನಿವಾಸಿ ತೊಪ್ಪಯ್ಯ ಹನುಮಂಪುರ ಎಂಬವರ ಪುತ್ರ ನಾಗೇಶ್ (22) ಎಂದು ತಿಳಿದುಬಂದಿದೆ.
ಬೆಂಗಳೂರಿನಿಂದ ಬರುತ್ತಿದ್ದ ಲಾರಿಯು ಗೋಳಿತ್ತೊಟ್ಟು ಸೇತುವೆ ಬಳಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದು ಮಂಗಳೂರಿನಿಂದ ಬರುತ್ತಿದ್ದ ಲಾರಿಗೆ ಢಿಕ್ಕಿಯಾಗಿದೆ ಎನ್ನಲಾಗಿದ್ದು, ಇದರಿಂದ ಎರಡು ಲಾರಿಗಳ ಮುಂಭಾಗ ಪರಸ್ಪರ ಅoಟಿ ಹೋಗಿದ್ದು, ಚಾಲಕರು ಲಾರಿಯೊಳಗಡೆ ಸಿಲುಕಿಕೊಂಡಿದ್ದರು. ಬಳಿಕ ಜೆಸಿಬಿ ಬಳಸಿ ಲಾರಿಗಳನ್ನು ಬೇರ್ಪಡಿಸಿ ಚಾಲಕರನ್ನು ಹೊರತರಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.