ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯನ್ನು ಬಿಜೆಪಿ ಇನ್ನೂ ನಿರ್ಧರಿಸಿಲ್ಲ: ಅಮಿತ್ ಶಾ
ಹೊಸದಿಲ್ಲಿ,ಮೇ 21: ಮುಂಬರುವ ರಾಷ್ಟ್ರಪತಿ ಚುನಾವಣೆಗೆ ತನ್ನ ಅಭ್ಯರ್ಥಿಯನ್ನು ಬಿಜೆಪಿ ಇನ್ನೂ ನಿರ್ಧರಿಸಬೇಕಾಗಿದೆ. ಇದೇ ವೇಳೆ ಆರೆಸ್ಸೆಸ್ ವರಿಷ್ಠ ಮೋಹನ ಭಾಗವತ್ ಅವರು ಆಡಳಿತ ಮೈತ್ರಿಕೂಟದ ಅಭ್ಯರ್ಥಿಯನ್ನಾಗಿಸಬೇಕೆಂಬ ಶಿವಸೇನೆ ಪ್ರಸ್ತಾವವನ್ನು ಪಕ್ಷವು ತಿರಸ್ಕರಿಸಿದೆ.
ಆಜ್ ತಕ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಾಷ್ಟ್ರಪತಿ ಚುನಾವಣೆಗೆ ಜಂಟಿ ಅಭ್ಯರ್ಥಿಯನ್ನು ನಿಲ್ಲಿಸುವ ನಿಟ್ಟಿನಲ್ಲಿ ಪ್ರತಿಪಕ್ಷಗಳು ಈಗಾಗಲೇ ಸಮಾಲೋಚನೆ ನಡೆಸುತ್ತಿದ್ದು, ಬಿಜೆಪಿ ಯಾರನ್ನು ಕಣಕ್ಕಿಳಿಸಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಪಕ್ಷಾಧ್ಯಕ್ಷ ಅಮಿತ್ ಶಾ ಅವರು, ಆ ಬಗ್ಗೆ ನಿರ್ಧಾರವನ್ನು ಇನ್ನಷ್ಟೇ ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದರು.
ನನ್ನ ಮನಸ್ಸಿನಲ್ಲಿ ಯಾವುದೇ ಹೆಸರಿದ್ದರೂ ಅದನ್ನು ಮೊದಲು ಪಕ್ಷದಲ್ಲಿ ಚರ್ಚಿಸಬೇಕಾಗುತ್ತದೆ ಎಂದ ಅವರು, ಭಾಗವತ್ ಅವರನ್ನು ಅಭ್ಯರ್ಥಿಯಾಗಿಸಬೇಕೆಂಬ ಶಿವಸೇನೆಯ ಪ್ರಸ್ತಾವವನ್ನು ಪಕ್ಷವೇ ತಳ್ಳಿಹಾಕಿದೆ ಎಂದರು.
ಕಳೆದ ಹಲವು ತಿಂಗಳುಗಳಿಂದಲೂ ಅಶಾಂತಿಯ ಬೇಗೆಯಲ್ಲಿ ಬೇಯುತ್ತಿರುವ ಕಾಶ್ಮೀರ ಕುರಿತ ಪ್ರಶ್ನೆಗೆ, ರಾಜ್ಯದಲ್ಲಿಯ ಸ್ಥಿತಿಯ ಬಗ್ಗೆ ಲವಲೇಶವೂ ಕಳವಳ ಪಡಬೇಕಿಲ್ಲ, ನರೇಂದ್ರ ಮೋದಿ ಸರಕಾರವು ಶೀಘ್ರವೇ ಅದನ್ನು ನಿಯಂತ್ರಿಸಲಿದೆ ಎಂದು ಶಾ ಉತ್ತರಿಸಿದರು.
ಕಾಶ್ಮೀರದಲ್ಲಿಯ ಸ್ಥಿತಿಯ ಬಗ್ಗೆ ಏನನ್ನು ಬಿಂಬಿಸಲಾಗುತ್ತಿದೆಯೋ ಮತ್ತು ವಾಸ್ತವದ ನಡುವೆ ಅಗಾಧ ಅಂತರವಿದೆ ಎಂದ ಅವರು, ಸಮಸ್ಯೆ ಕೇವಲ ಮೂರೂವರೆ ಜಿಲ್ಲೆಗಳಿಗೆ ಸೀಮಿತವಾಗಿದೆ ಎಂದರು.
ಮಕ್ಕಳ ಅಪಹರಣ ವದಂತಿಗಳ ಹಿನ್ನೆಲೆಯಲ್ಲಿ ಜಾರ್ಖಂಡ್‌ನಲ್ಲಿ ಗುಂಪಿನಿಂದ ಏಳು ಜನರ ಹತ್ಯೆಯನ್ನು 125 ಕೋಟಿ ಜನಸಂಖ್ಯೆಯ ದೇಶದಲ್ಲಿ ಸಂಭವಿಸುವ ‘ಪ್ರತ್ಯೇಕ ಮತ್ತು ಬಿಡಿ ಘಟನೆ’ಎಂದು ಬಣ್ಣಿಸಿದ ಅವರು, ಇಂತಹ ಹಿಂಸಾಚಾರದ ಪ್ರಕರಣಗಳನ್ನು ಬಿಜೆಪಿಯೊಂದಿಗೆ ತಳುಕು ಹಾಕುವುದು ಸೂಕ್ತವಲ್ಲ ಎಂದರು.
ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಬಿಜೆಪಿಯನ್ನು ಸೇರುತ್ತಾರೆಯೇ ಎಂಬ ಪ್ರಶ್ನೆಗೆ, ಈ ಬಗ್ಗೆ ನಿರ್ಧಾರವನ್ನು ಸ್ವತಃ ಅವರೇ ತೆಗೆದುಕೊಳ್ಳಬೇಕು. ಬಿಜೆಪಿ ಎಲ್ಲ ಒಳ್ಳೆಯ ಜನರನ್ನು ತನ್ನ ತೆಕ್ಕೆಗೆ ಸ್ವಾಗತಿಸುತ್ತದೆ ಎಂದು ಶಾ ಉತ್ತರಿಸಿದರು.