‘ಏರ್‌ಲಿಫ್ಟ್’ ಚಿತ್ರಕ್ಕೆ ಸ್ಫೂರ್ತಿಯಾಗಿದ್ದ ನಿಜ ಜೀವನದ ಹೀರೋ ಮ್ಯಾಥ್ಯೂಸ್ ನಿಧನ

Update: 2017-05-21 10:06 GMT

ತಿರುವನಂತಪುರ, ಮೇ 21: ಕುವೈಟ್ ಮೇಲೆ 1990ರಲ್ಲಿ ಇರಾಕ್ ಆಕ್ರಮಣ ನಡೆಸಿದ್ದ ಸಂದರ್ಭದಲ್ಲಿ ಲಕ್ಷಾಂತರ ಭಾರತೀಯರು ಕುವೈಟ್‌ನಿಂದ ಸುರಕ್ಷಿತವಾಗಿ ತಾಯ್ನಿಡಿಗೆ ಮರಳಲು ಪ್ರಮುಖ ಪಾತ್ರವಹಿಸಿದ್ದ, ಭಾರತೀಯ ಮೂಲದ ಕುವೈಟ್‌ನ ಪ್ರತಿಷ್ಠಿತ ಉದ್ಯಮಿ ಮಥನಿ ಮ್ಯಾಥ್ಯೂಸ್ ನಿಧನರಾಗಿದ್ದಾರೆ.

ಪಟ್ಟಣಂತಿಟ್ಟ ಜಿಲ್ಲೆಯ ಕುಂಬನಾಡ್ ಮೂಲದ 81ರ ಪ್ರಾಯದ ಮ್ಯಾಥ್ಯೂಸ್ ಕಳೆದ ಕೆಲವು ಸಮಯದಿಂದ ಅಸೌಖ್ಯದಿಂದ ಬಳಲುತ್ತಿದ್ದು, ಶನಿವಾರ ಕುವೈಟ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ವರದಿಗಳು ತಿಳಿಸಿವೆ.

  ಮ್ಯಾಥ್ಯೂಸ್ ನಿಧನಕ್ಕೆ ಶೋಕ ವ್ಯಕ್ತಪಡಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್,‘‘ 1990ರ ಗಲ್ಫ್ ಯುದ್ಧದ ವೇಳೆ ಗಲ್ಫ್ ರಾಷ್ಟ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಸಾವಿರಾರು ಭಾರತೀಯರು ಸುರಕ್ಷಿತವಾಗಿ ತಮ್ಮ ತಾಯ್ನಿಡಿಗೆ ಮರಳಲು ಸಹಾಯ ಹಸ್ತ ಚಾಚಿದ್ದ ಮ್ಯಾಥ್ಯೂಸ್‌ರ ಸೇವೆ ಸದಾ ಸ್ಮರಣೀಯ. ಮ್ಯಾಥ್ಯೂಸ್ ತಮ್ಮ ಪ್ರಾಣ ಹಾಗೂ ಆಸ್ತಿಯನ್ನು ಉಳಿಸಿಕೊಳ್ಳುವ ಜೊತೆಗೆ ಯುದ್ದದಲ್ಲಿ ಸರ್ವಸ್ವವನ್ನೂ ಕಳೆದುಕೊಂಡಿದ್ದ ಭಾರತೀಯರು ಸುರಕ್ಷಿತವಾಗಿ ತವರಿಗೆ ವಾಪಸಾಗಲು ನೆರವಾಗಿದ್ದರು. ಗಲ್ಫ್‌ನಲ್ಲಿ ಸಿಲುಕಿಹಾಕಿಕೊಂಡಿದ್ದ ಭಾರತೀಯರಿಗೆ ಆಹಾರ ಹಾಗೂ ನೀರು ನೀಡಿ ಮಾನವೀಯತೆ ಮೆರೆದಿದ್ದರು’’ ಎಂದು ಹೇಳಿದ್ದಾರೆ.

 1990ರಲ್ಲಿ ವಿ.ಪಿ ಸಿಂಗ್ ನೇತೃತ್ವದ ಕೇಂದ್ರ ಸರಕಾರ ಇರಾಕ್-ಕುವೈಟ್ ಯುದ್ದದಲ್ಲಿ ಸಿಲುಕಿ ಹಾಕಿಕೊಂಡಿದ್ದ 1.50 ಲಕ್ಷ ಭಾರತೀಯರನ್ನು ಗಲ್ಫ್ ರಾಷ್ಟ್ರದಿಂದ ತೆರವುಗೊಳಿಸಲು ದೊಡ್ಡ ಕಾರ್ಯಾಚರಣೆ ನಡೆಸಿತ್ತು. ವಿಮಾನದ ಮೂಲಕ ಎಲ್ಲರನ್ನು ಸ್ವದೇಶಕ್ಕೆ ಕರೆತಂದಿತ್ತು. ಈ ವೇಳೆ ಮ್ಯಾಥ್ಯೂಸ್ ಅವರು ಕುವೈಟ್‌ನಲ್ಲಿ ಕೇಂದ್ರ ಸರಕಾರದ ‘ಅನಧಿಕೃತ ಪ್ರತಿನಿಧಿ’ಯಾಗಿ ಕಾರ್ಯನಿರ್ವಹಿಸಿ ಕುವೈಟ್‌ನಿಂದ ಭಾರತೀಯರ ತೆರವು ಕಾರ್ಯಾಚರಣೆಯಲ್ಲಿ ಸಂಪೂರ್ಣ ನೆರವು ನೀಡಿದ್ದರು ಎಂದು ವಿಜಯನ್ ಹೇಳಿದ್ದಾರೆ.

‘ಟೊಯೊಟಾ’ ಸನ್ನಿ ಎಂದೇ ಖ್ಯಾತಿ ಪಡೆದಿದ್ದ ಮ್ಯಾಥ್ಯೂಸ್ ಹಿಂದಿ ಚಿತ್ರ ‘ಏರ್‌ಲಿಫ್ಟ್’ನಲ್ಲಿ ಅಕ್ಷಯ್ ಕುಮಾರ್ ಪಾತ್ರಕ್ಕೆ ಸ್ಫೂರ್ತಿಯಾಗಿದ್ದರು.

ಮ್ಯಾಥ್ಯೂಸ್ 1956ರಲ್ಲಿ ತನ್ನ 20ರ ಹರೆಯದಲ್ಲಿ ಕೆಲಸವನ್ನು ಹುಡುಕಿಕೊಂಡು ಕುವೈಟ್‌ಗೆ ತೆರಳಿದ್ದರು. ಟೊಯೊಟಾ ಕಂಪೆನಿಗೆ ಟೈಪಿಸ್ಟ್ ಆಗಿ ಸೇರ್ಪಡೆಯಾಗಿದ್ದ ಅವರು 1989ರಲ್ಲಿ ಕಂಪೆನಿಯ ಆಡಳಿತ ನಿರ್ದೇಶಕರಾಗಿ ನಿವೃತ್ತಿಯಾಗಿದ್ದರು. ಮ್ಯಾಥ್ಯೂಸ್ 1990ರಲ್ಲಿ ಕಾರ್ ರೆಂಟಲ್ ಕಂಪೆನಿ ಹಾಗೂ ಜನರಲ್ ಟ್ರೇಡಿಂಗ್ ಕಂಪೆನಿಯನ್ನು ಆರಂಭಿಸಿದ್ದರು. ಜಬ್ರಿಯಾ ಇಂಡಿಯನ್ ಸ್ಕೂಲ್‌ನ ಚೇರ್ಮನ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News