91 ಲಕ್ಷ ನೂತನ ತೆರಿಗೆದಾರರು ಇಡೀ ವರ್ಷದಲ್ಲಿ,ನೋಟು ರದ್ದತಿಯ ಬಳಿಕವಲ್ಲ : ವಿತ್ತ ಸಚಿವಾಲಯ
ಹೊಸದಿಲ್ಲಿ,ಮೇ 21: ಕಳೆದ ವಾರ ನೋಟು ರದ್ದತಿಯ ಪರಿಣಾಮಗಳನ್ನು ಚರ್ಚಿಸುತ್ತಿದ್ದ ಸಂದರ್ಭ ವಿತ್ತಸಚಿವ ಅರುಣ್ ಜೇಟ್ಲಿ ಅವರು 91ಲಕ್ಷ ಜನರು ಹೊಸದಾಗಿ ತೆರಿಗೆ ಜಾಲಕ್ಕೆ ಸೇರಿದ್ದಾರೆ ಎಂದು ಹೇಳಿದ್ದರು. ಇದನ್ನು ಮಾಧ್ಯಮಗಳು ನ.8ರ ನೋಟುರದ್ದತಿಯ ಬಳಿಕ 91 ಲ.ಜನರು ಹೊಸದಾಗಿ ತೆರಿಗೆ ವ್ಯಾಪ್ತಿಗೆ ಬಂದಿದ್ದಾರೆ ಎಂದೇ ವ್ಯಾಪಕವಾಗಿ ವರದಿ ಮಾಡಿದ್ದವು. ಈ 91 ಲಕ್ಷ ಸಂಖ್ಯೆ 2016-17ರ ಇಡೀ ಹಣಕಾಸು ವರ್ಷದ್ದಾಗಿದೆ ಎಂದು ವಿತ್ತ ಸಚಿವಾಲಯವು ಈಗ ಸ್ಪಷ್ಟಪಡಿಸಿದೆ.
‘ಆಪರೇಷನ್ ಕ್ಲೀನ್ ಮನಿ’ಗೆ ಚಾಲನೆ ಸಂದರ್ಭ ಜೇಟ್ಲಿಯವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಾಗ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ)ಯ ಅಧ್ಯಕ್ಷ ಸುಶೀಲಚಂದ್ರ ಉಪಸ್ಥಿತರಿದ್ದರು.
ಆದಾಯ ತೆರಿಗೆ ಆಯುಕ್ತೆ ಹಾಗೂ ಸಿಬಿಡಿಟಿಯ ವಕ್ತಾರೆ ಮೀನಾಕ್ಷಿ ಗೋಸ್ವಾಮಿ ಅವರು 2016-17ನೇ ಹಣಕಾಸು ವರ್ಷದಲ್ಲಿ ಹೊಸದಾಗಿ ನೋಂದಣಿಗೊಂಡಿರುವ ತೆರಿಗೆದಾರರ ಒಟ್ಟು ಸಂಖ್ಯೆ 91 ಲಕ್ಷ ಎಂದು ಆಂಗ್ಲ ಸುದ್ದಿವಾಹಿನಿಗೆ ತಿಳಿಸಿದ್ದಾರೆ. 2016,ಎಪ್ರಿಲ್‌ವರೆಗೆ ದೇಶದಲ್ಲಿ ತೆರಿಗೆದಾತರ ಒಟ್ಟು ಸಂಖ್ಯೆ ಐದು ಕೋಟಿಗಳಷ್ಟಿತ್ತು.
2014-15ನೇ ಹಣಕಾಸು ವರ್ಷದಲ್ಲಿ ಹೊಸದಾಗಿ ಆದಾಯ ತೆರಿಗೆ ಜಾಲಕ್ಕೊಳ ಪಟ್ಟವರ ಸಂಖ್ಯೆ 76 ಲಕ್ಷ ಆಗಿದ್ದು, ಎರಡು ವರ್ಷಗಳ ಬಳಿಕ ಇಂಥವರ ಸಂಖ್ಯೆ 91 ಲಕ್ಷವಾಗಿದೆ. ಅಂದರೆ ಶೇ.15ರಷ್ಟು ಏರಿಕೆಯಾಗಿದೆ. ಇದು ತೆರಿಗೆ ಜಾಲ ವಿಸ್ತಾರಗೊಳ್ಳು ತ್ತಿರುವುದನ್ನು ಸೂಚಿಸುತ್ತಿದೆ. 2015-16ರ ದತ್ತಾಂಶಗಳು ಬಹಿರಂಗವಾಗಿ ಲಭ್ಯವಿಲ್ಲ.
ಕಪ್ಪುಹಣವನ್ನು ಪತ್ತೆ ಹಚ್ಚುವಲ್ಲಿ ಭಾರೀ ಯಶಸ್ಸು ಸಾಧಿಸಿದ್ದೇವೆ ಎಂದು ಹೇಳಿಕೊಂಡಿ ರುವ ತೆರಿಗೆ ಅಧಿಕಾರಿಗಳು ನೋಟು ರದ್ದತಿಯ ಬಳಿಕ ಶೋಧ ಮತ್ತು ಸರ್ವೆ ಕಾರ್ಯಾಚರಣೆಗಳಲ್ಲಿ ಒಟ್ಟು 24,044 ಕೋ.ರೂ.ಗಳ ಅಘೋಷಿತ ಆದಾಯವನ್ನು ಪತ್ತೆ ಹಚ್ಚಲಾಗಿದೆಯೆಂದು ತಿಳಿಸಿದ್ದಾರೆ.
ಆದರೆ 2013-14ರಲ್ಲಿ ಶೋಧ ಕಾರ್ಯಾಚರಣೆ ಮತ್ತು ಸರ್ವೆಗಳಲ್ಲಿ 1,01,181 ಕೋ.ರೂ.ಗಳ ಅಘೋಷಿತ ಸಂಪತ್ತು ಪತ್ತೆಯಾಗಿತ್ತು...ಅಂದರೆ ಸುಮಾರು ನಾಲ್ಕು ಪಟ್ಟು ಹೆಚ್ಚು. 24,044 ಕೋ.ರೂ.ಮೊತ್ತ ಪೂರ್ಣ ವರ್ಷದ್ದಲ್ಲ, ಕಳೆದ ಕೇವಲ ಆರು ತಿಂಗಳ ಅವಧಿಯಲ್ಲಿ ಪತ್ತೆಯಾಗಿರುವ ಅಘೋಷಿತ ಆದಾಯ ಎಂದು ಪರಿಗಣಿಸಿದರೂ 2013-14ರ ದತ್ತಾಂಶಕ್ಕೆ ಹೋಲಿಸಿದರೆ ಅರ್ಧಕ್ಕರ್ಧ ಕಡಿಮೆಯೇ ಆಗಿದೆ.