×
Ad

ದಾಪಂತ್ಯ ಜೀವನಕ್ಕೆ ಕಾಲಿರಿಸಿದ ರವೀಂದ್ರ- ಕುಶಲಾ ಜೋಡಿ

Update: 2017-05-21 16:51 IST

 ಉಡುಪಿ, ಮೇ 21: ಉಡುಪಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಬೌದ್ಧ ಧರ್ಮದ ಪದ್ಧತಿಯ ವಿವಾಹ ಕಾರ್ಯಕ್ರಮವು ಇಂದು ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ಜರಗಿತು.

ಉಡುಪಿ ದಲಿತ ಕಲಾ ಮಂಡಳಿಯ ರವೀಂದ್ರ ಬಂಟಕಲ್ ಹಾಗೂ ಕುಶಲಾ ಕುಂಜಾರುಗಿರಿ ಬೌದ್ಧ ಧರ್ಮದ ಪದ್ದತಿಯಲ್ಲಿ ಸತಿಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಈ ವಿವಾಹ ಸಮಾರಂಭವನ್ನು ಉಡುಪಿ ಹಾಗೂ ದ.ಕ. ಜಿಲ್ಲಾ ಬೌದ್ಧ ಮಹಾಸಭಾ ಆಯೋಜಿಸಿತು.

ಕುಂದಾಪುರ ಕೆಎಸ್‌ಆರ್‌ಟಿಸಿಯಲ್ಲಿ ಉದ್ಯೋಗಿಯಾಗಿರುವ ರವೀಂದ್ರ ಬಂಟಕಲ್ ಹಾಗೂ ಗೇರುಬೀಜ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕುಶಲಾ ಕಳೆದ ಒಂದೂವರೆ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಮನೆ ಯವರ ಒಪ್ಪಿಗೆ ಪಡೆದು ವಿವಾಹವಾಗಲು ನಿಶ್ಚಿಯಿಸಿದರು. ದಲಿತ ಹೋರಾಟದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಇವರಿಬ್ಬರು ಅಂಬೇಡ್ಕರ್ ಪ್ರೇರಣೆಯಿಂದ ಬೌದ್ಧ ಧರ್ಮದ ಪದ್ಧತಿಯಲ್ಲಿ ವಿವಾಹ ಆಗಲು ನಿಶ್ಚಿಯಿಸಿದರು. ಅದರಂತೆ ಈ ದಿನವನ್ನು ನಿಗದಿಪಡಿಸಿದ್ದರು.

ರವೀಂದ್ರ 2012ರಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರೆ, ಕುಶಲಾ ಇದೇ ದಿನ ಬೌದ್ಧ ಧರ್ಮಕ್ಕೆ ಸೇರ್ಪಡೆಗೊಂಡರು. ಧಮ್ಮಚಾರಿ ಎಸ್.ಆರ್. ಲಕ್ಷ್ಮಣ್ ಪೌರೋಹಿತ್ಯದಲ್ಲಿ ಪ್ರಾಚೀನ ಬೌದ್ಧ ಧರ್ಮ ಪದ್ದತಿಯಂತೆ ತಾಳಿ ಕಟ್ಟಿ, ಹಾರ ಬದಲಾಯಿಸಿ ಕೊಂಡು ಇವರಿಗೆ ಸತಿಪತಿಗಳಾದರು.

ಮೈಸೂರಿನ ಬೌದ್ಧ ಬಿಕುನಿ ಗೌತಮಿ ಮಾತಾಜಿ ಪ್ರವಚನ ಹಾಗೂ ಬುದ್ಧನ ಸಂದೇಶವನ್ನು ನೀಡಿದರು. ‘ಬೌದ್ಧ ಧರ್ಮದ ಪ್ರಾಚೀನ ಪದ್ಧತಿಯಂತೆ ರವೀಂದ್ರ ಹಾಗೂ ಕುಶಲ ವಿವಾಹವಾದರು. ಇದು ಉಡುಪಿ ಜಿಲ್ಲೆಯ ಪ್ರಥಮ ಬೌದ್ಧ ಧರ್ಮದ ವಿವಾಹ. ಬೌದ್ಧ ಧರ್ಮದ ವಿವಾಹದಲ್ಲಿ ಪಾಲಿ ಭಾಷೆಯಲ್ಲಿಯೇ ಮಂತ್ರ ಗಳನ್ನು ಪಠಿಸಲಾಗುತ್ತದೆ. ಬಳಿಕ ನೋಂದಾವಣಿ ಮಾಡಿಸಿ ಬೌದ್ಧ ಮಹಾಸಭಾ ದಿಂದ ಪ್ರಮಾಣಪತ್ರವನ್ನು ನೀಡಲಾಯಿತು.

ವಿವಾಹದಲ್ಲಿ ಪಾಲ್ಗೊಂಡವರಿಗೆ ಮಾಂಸಹಾರ ಹಾಗೂ ಸಸ್ಯಹಾರ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ಬೌದ್ಧ ಮಹಾ ಸಭಾದ ಉಡುಪಿ ಜಿಲ್ಲಾಧ್ಯಕ್ಷ ಶಂಭು ಮಾಸ್ಟರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News