ಉತ್ತಮ ಬದುಕಿಗೆ ಪರಿಶ್ರಮ, ಸಾಧನೆ ಮುಖ್ಯ: ಶಿವರಾಂ
ಉಡುಪಿ, ಮೇ 21: ಸಂತೋಷದಿಂದ ಬದುಕುವುದೇ ಪ್ರತಿಯೊಬ್ಬರ ಉದ್ದೇಶ. ಅದನ್ನು ಪಡೆಯಬೇಕಾದರೆ ಸಾಧನೆ ಮತ್ತು ಪರಿಶ್ರಮ ಅಗತ್ಯ ಎಂದು ಉಡುಪಿ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿ ಕಾರಿ ಶಿವರಾಂ ಕೆ. ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಲೀಗಲ್ ಇನ್‌ಫೋ ಪೇಜಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ನಿಟ್ಟೂರು ಸ್ತ್ರೀ ಸೇವಾ ನಿಕೇತನದಲ್ಲಿ ರವಿವಾರ ಆಯೋಜಿಸಲಾದ ವ್ಯಕ್ತಿತ್ವ ವಿಕಸನ ಮತ್ತು ಗುರಿ ಸಾಧನೆ ಹಾಗೂ ರಸ್ತೆ ಸುರಕ್ಷಾ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿ ದ್ದರು.
ನಾವು ಆಡುವ ಮಾತು ಒಳ್ಳೆಯದಿದ್ದರೆ ಬೇರೆಯವರು ಕೂಡ ನಮ್ಮ ಬಗ್ಗೆ ಒಳ್ಳೆಯದನ್ನೇ ಆಡುತ್ತಾರೆ. ಹಾಗಾಗಿ ಕೆಟ್ಟ ಮಾತುಗಳಿಂದ ದೂರ ಇರಬೇಕು. ತಾಳ್ಮೆಯಿಂದ ಸಾಧನೆ ಮಾಡಲು ಸಾಧ್ಯ. ಜೀವನದಲ್ಲಿ ಪರಿಶ್ರಮ ಮತ್ತು ಸಾಧನೆ ಅತಿಮುಖ್ಯ ಎಂದು ಅವರು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ವಹಿಸಿದ್ದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ರಾಮ್ ಪ್ರಶಾಂತ್ ಎಂ.ಎನ್., ಉಡುಪಿ ಮಾನವ ಹಕ್ಕುಗಳ ಮತ್ತು ಅಹ ವಾಲು ಅಧ್ಯಕ್ಷೆ ಸುಲ್ತಾನ ಇಕ್ಬಾಲ್ ಮುಖ್ಯ ಅತಿಥಿಗಳಾಗಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿಯ ವಕೀಲ ದಯಾನಂದ ಜಿ.ಉದ್ಯಾವರ ಭಾಗವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ತ್ರೀ ಸೇವಾ ನಿಕೇತನದ ಅಧೀಕ್ಷಕ ಅನಿಲ್ ಕೆ.ಹಳ್ಳಿ ಸ್ವಾಗತಿಸಿದರು. ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿ ಹುಲಿಗವ್ವ ಜೊಗೇರ್ ಕಾರ್ಯಕ್ರಮ ನಿರೂಪಿಸಿದರು.