ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುವುದೇ ರಾಜೀವ್ ಗಾಂಧಿಗೆ ಸಲ್ಲಿಸುವ ಶ್ರದ್ಧಾಂಜಲಿ: ಕೋಡಿಜಾಲ್
ಮಂಗಳೂರು, ಮೇ 21: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಪಕ್ಷದ ನಾಯಕರು, ಕಾರ್ಯಕರ್ತರು ಶ್ರಮವಹಿಸಿ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದೇ ಮಾಜಿ ಪ್ರಧಾನಿ ದಿ. ರಾಜೀವ ಗಾಂಧಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿಯಾಗಿದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಹೇಳಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ರವಿವಾರ ನಡೆದ ರಾಜೀವ್ ಗಾಂಧಿಯ ಪುಣ್ಯತಿಥಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ರಾಜೀವ್ ಗಾಂಧಿ ಅಧಿಕಾರದಲ್ಲಿದ್ದಾಗ ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ 410 ಸ್ಥಾನವಿತ್ತು. ಆದರೆ ಈಗ ಕೇವಲ 44 ಸ್ಥಾನ ಮಾತ್ರವಿದೆ. ಇದು ಶೋಚನೀಯ. ಇದಕೆ ಕಾಂಗ್ರೆಸ್ ಪಕ್ಷದೊಳಗೆ ಐಕ್ಯತೆ ಇಲ್ಲದಿರುವುದೇ ಕಾರಣವಾಗಿದೆ. ಎಲ್ಲರೂ ಜೊತೆಗೂಡಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕಾಗಿದೆ ಎಂದರು.
ವೇದಿಕೆಯಲ್ಲಿ ಮಾಜಿ ಮೇಯರ್ ಹರಿನಾಥ್, ಮಾಜಿ ಉಪಮೇಯರ್ ಕವಿತಾ ವಾಸು, ಕಾರ್ಪೊರೇಟರ್ ಅಪ್ಪಿ, ಅಶೋಕ್ ಡಿ.ಕೆ., ನವೀನ್ ಡಿಸೋಜ, ಕೇಶವ ಮರೋಳಿ, ಮುಖಂಡರಾದ ಪದ್ಮನಾಭ ನರಿಂಗಾನ, ಬಾಲಕೃಷ್ಣ ಶೆಟ್ಟಿ, ವಿಶ್ವಾಸ್‌ಕುಮಾರ್ ದಾಸ್, ಸಂತೋಷ್ ಕುಮಾರ್ ಶೆಟ್ಟಿ, ನಝೀರ್ ಬಜಾಲ್, ಅಬೂಬಕರ್ ಜಲ್ಲಿಗುಡ್ಡೆ, ತೆರೆಸಾ ಲೋಬೊ, ಐಮೋನು ಕಣ್ಣೂರು, ಹೇಮಾ ಉಳ್ಳಾಲ ಉಪಸ್ಥಿತರಿದ್ದರು.