ಕೂಲಿ ಕೆಲಸದಾಕೆಯ ಮಗಳ ಸಾಧನೆ: ಶೈಕ್ಷಣಿಕ ನೆರವಿಗೆ ಮನವಿ

Update: 2017-05-21 11:59 GMT

ಶಿರ್ವ, ಮೇ 21: ಮನೆ-ಮನೆ ಅಲೆದು ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿರುವ ಪಡುಬೆಳ್ಳೆಯ ವಿಜಯಾ ಎಂಬವರ ಪುತ್ರಿ, ಪಡುಬೆಳ್ಳೆ ಶ್ರೀ ನಾರಾಯಣಗುರು ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸೌಮ್ಯಾ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 589 (ಶೇ.94.24) ಅಂಕಗಳನ್ನು ಗಳಿಸಿ ವಿಶಿಷ್ಟ ಸಾಧನೆ ಮಾಡಿದ್ದು, ಭವಿಷ್ಯದಲ್ಲಿ ಸಿಎ ಆಗುವ ಕನಸು ಹೊಂದಿರುವ ಸೌಮ್ಯ ಭವಿಷ್ಯದ ಶಿಕ್ಷಣಕ್ಕೆ ನೆರವು ನೀಡುವಂತೆ ಕುಟುಂಬ ಮನವಿ ಮಾಡಿದೆ.

ವಿಜಯಾ ಅವರ ಪತಿ ಕೃಷ್ಣ ಪೂಜಾರಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ನಂತರ ವಿಜಯಾ ಕೂಲಿ ಕೆಲಸ ಮಾಡಿಕೊಂಡು ಕುಟುಂಬವನ್ನು ನಿರ್ವಹಿಸುವುದರ ಜೊತೆಗೆ ತನ್ನ ನಾಲ್ಕು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುತ್ತಿದ್ದಾರೆ.

ಇವರ ಹಿರಿಯ ಮಗಳು ರಮ್ಯಾ ಎಸೆಸೆಲ್ಸಿಯಲ್ಲಿ 514 ಅಂಕಗಳಿಸಿ ಶಾಲೆಯಲ್ಲಿ ಪ್ರಥಮ ಸ್ಥಾನಿಯಾಗಿದ್ದಳು. ಪ್ರಸ್ತುತ ಈಕೆ ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಸಿಎ ವಿಭಾಗದಲ್ಲಿ ಅಂತಿಮ ವರ್ಷದಲ್ಲಿ ಕಲಿಯುತ್ತಿದ್ದಾಳೆ.

ಮಗ ರಮಾನಂದ(17) ಪೊಲಿಪು ಸರಕಾರಿ ಪ.ಪೂ. ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆಯುತ್ತಿದ್ದಾನೆ. ಸುಮಾ(13) ಪಡುಬೆಳ್ಳೆ ಶ್ರೀನಾರಾಯಣಗುರು ಪ್ರೌಢ ಶಾಲೆಯಲ್ಲಿ 7ನೆ ತರಗತಿಯ ವಿದ್ಯಾರ್ಥಿನಿ. ಇವರಿಗೆ ಪಡುಬೆಳ್ಳೆ ಐದು ಸೆಂಟ್ಸ್ ಕಾಲನಿಯಲ್ಲಿ ನಿವೇಶನ ಮಂಜೂರಾಗಿದ್ದು, ಆ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ಬದುಕು ನಡೆಸುತ್ತಿದ್ದರು.

ಇವರ ಬಡತನ, ಶ್ರಮದ ಜೀವನ ಹಾಗೂ ಕೂಲಿ ಕೆಲಸದಲ್ಲಿ ಪ್ರಾಮಾಣಿಕತೆಯನ್ನು ಗಮನಿಸಿದ ಬಂಟಕಲ್ಲು ಬಿ.ಸಿ.ರೋಡ್‌ ಸಮೀಪದ ಲಿಲ್ಲಿ ಕ್ವಾಡ್ರಸ್ ತಮ್ಮ ಸಣ್ಣ ಮನೆಯನ್ನು ತಾತ್ಕಾಲಿಕ ಹಾಗೂ ಉಚಿತವಾಗಿ ನೀಡಿದ್ದಾರೆ. ಇವರು ಕಳೆದ 5 ವರ್ಷಗಳಿಂದ ಇಲ್ಲಿಯೇ ಮಕ್ಕಳೊಂದಿಗೆ ವಾಸವಾಗಿದ್ದಾರೆ.

ಪ್ರತಿಭಾನ್ವಿತೆ ಸೌಮ್ಯಾಳ ಶಿಕ್ಷಣಕ್ಕೆ ಆರ್ಥಿಕ ಸಹಾಯ ನೀಡಬಯಸುವ ದಾನಿಗಳು ಕರ್ನಾಟಕ ಬ್ಯಾಂಕ್ ಬಂಟಕಲ್ಲು ಶಾಖೆಯಲ್ಲಿರುವ ಆಕೆಯ ಖಾತೆಗೆ (ಖಾತೆ ನಂ.0822500100527001) ಜಮಾ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್:-9008355979 ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News