ಟ್ರಂಪ್‌ಗೆ ಸೌದಿಯ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ

Update: 2017-05-21 14:54 GMT

ರಿಯಾದ್, ಮೇ 21: ಸೌದಿ ಅರೇಬಿಯ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಆತಿಥೇಯ ದೊರೆ ಸಲ್ಮಾನ್ ಬಿನ್ ಅಬ್ದಲಝೀಝ್ ಅಲ್ ಸೌದ್ ಶನಿವಾರ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ.

ಸೌದಿ ರಾಜಧಾನಿಯ ರಾಜ ಆಸ್ಥಾನದಲ್ಲಿ ನಡೆದ ಸಭೆಯಲ್ಲಿ ದೊರೆ ಸಲ್ಮಾನ್, ಟ್ರಂಪ್‌ರನ್ನು ಕಿಂಗ್ ಅಬ್ದುಲಝೀಝ್ ಚಿನ್ನದ ಪದಕದಿಂದ ಅಲಂಕರಿಸಿದರು.

ವಲಯದಲ್ಲಿ ಮತ್ತು ವಿಶ್ವಾದ್ಯಂತ ಭದ್ರತೆ ಮತ್ತು ಸ್ಥಿರತೆಯನ್ನು ವೃದ್ಧಿಸುವ ಅವರ ಇಚ್ಛೆಯನ್ನು ಮನ್ನಿಸಿ ಈ ಗೌರವವನ್ನು ನೀಡಲಾಗಿದೆ ಎಂದು ದೊರೆ ಈ ಸಂದರ್ಭದಲ್ಲಿ ಘೋಷಿಸಿದರು.

ಈ ಸಂದರ್ಭದಲ್ಲಿ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಮತ್ತು ಶ್ವೇತಭವನದ ಇತರ ಹಲವಾರು ಅಧಿಕಾರಿಗಳು ಹಾಜರಿದ್ದರು.

ಈ ಹಿಂದೆ ಈ ಪ್ರಶಸ್ತಿಯನ್ನು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಬ್ರಿಟಿಶ್ ಪ್ರಧಾನಿ ತೆರೇಸಾ ಮೇ ಮತ್ತು ಟ್ರಂಪ್‌ರ ಪೂರ್ವಾಧಿಕಾರಿ ಬರಾಕ್ ಒಬಾಮರಿಗೆ ನೀಡಲಾಗಿತ್ತು.

24.5 ಲಕ್ಷ ಕೋಟಿ ರೂ. ವ್ಯಾಪಾರಕ್ಕೆ ಸಹಿ

ರಿಯಾದ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಸೌದಿ ಅರೇಬಿಯ ಭೇಟಿಯ ವೇಳೆ ಶನಿವಾರ ಉಭಯ ದೇಶಗಳು ಕನಿಷ್ಠ 380 ಬಿಲಿಯ ಡಾಲರ್ (ಸುಮಾರು 24.5 ಲಕ್ಷ ಕೋಟಿ ರೂಪಾಯಿ) ಮೊತ್ತದ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿವೆ.

ದೊರೆ ಸಲ್ಮಾನ್ ಮತ್ತು ಟ್ರಂಪ್ ಸೌದಿ ರಾಜಧಾನಿಯಲ್ಲಿ ಉನ್ನತ ಮಟ್ಟದ ಮಾತುಕತೆಗಳನ್ನು ನಡೆಸಿದರು. ಈ ಸಂದರ್ಭದಲ್ಲಿ ಉಭಯ ನಾಯಕರು ಸೌದಿ-ಅಮೆರಿಕ ಜಂಟಿ ಆಯಕಟ್ಟಿನ ಮುನ್ನೋಟ ಘೋಷಣೆಗೆ ಸಹಿ ಹಾಕಿದರು. ಹಲವು ರಕ್ಷಣಾ, ವಾಣಿಜ್ಯ ಮತ್ತು ತಂತ್ರಜ್ಞಾನ ಒಪ್ಪಂದಗಳಿಗೆ ಇದೇ ಸಂದರ್ಭದಲ್ಲಿ ಸಹಿ ಹಾಕಲಾಯಿತು.

ಟ್ರಂಪ್‌ರ ಸೌದಿ ಭೇಟಿಯು ಅರಬ್ ಜಗತ್ತಿನೊಂದಿಗಿನ ಅಮೆರಿಕದ ಸಂಬಂಧದಲ್ಲಿ ಹೊಸ ಅಧ್ಯಾಯದ ಆರಂಭವಾಗಿದೆ ಎಂದು ಸೌದಿ ವಿದೇಶ ಸಚಿವ ಆದಿಲ್ ಅಲ್-ಜುಬೇರ್ ಹೇಳಿದರು.

 ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ಜೊತೆಗೆ ಶನಿವಾರ ರಿಯಾದ್‌ನಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೊರೆ ಸಲ್ಮಾನ್ ಮತ್ತು ಟ್ರಂಪ್ ಸಹಿ ಹಾಕಿದ ಆಯಕಟ್ಟಿನ ಭಾಗೀದಾರಿಕೆ ಒಪ್ಪಂದವು ಪ್ರಬಲ ಆಯಕಟ್ಟು ಭಾಗೀದಾರಿಕೆಯಾಗಿ ಅಭಿವೃದ್ಧಿ ಹೊಂದುವುದು ಎಂದು ಅಲ್ ಜುಬೇರ್ ಆಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News