ಪಾಕ್: ಇನ್ನೋರ್ವ ಭಾರತೀಯನ ಬಂಧನ

Update: 2017-05-21 14:57 GMT

ಇಸ್ಲಾಮಾಬಾದ್, ಮೇ 21: ಅಗತ್ಯ ಪ್ರಯಾಣ ದಾಖಲೆಗಳನ್ನು ಹೊಂದಿಲ್ಲದ ಭಾರತೀಯನೊಬ್ಬನನ್ನು ಇಸ್ಲಾಮಾಬಾದ್‌ನಲ್ಲಿ ಬಂಧಿಸಲಾಗಿದೆ ಎಂದು ಪಾಕಿಸ್ತಾನಿ ಪೊಲೀಸರು ಹೇಳಿದ್ದಾರೆ.

ಬಂಧಿತ ವ್ಯಕ್ತಿಯನ್ನು ಮುಂಬೈ ನಿವಾಸಿ ಶೇಖ್ ನಬಿ ಎಂದು ಗುರುತಿಸಲಾಗಿದೆ.

ಈ ಪ್ರಕರಣದ ಬಗ್ಗೆ ಭಾರತೀಯ ಹೈಕಮಿಶನ್‌ಗೆ ಮಾಹಿತಿಯಿಲ್ಲ ಎಂದು ವಿದೇಶ ಸಚಿವಾಲಯದಲ್ಲಿರುವ ಮೂಲಗಳು ತಿಳಿಸಿವೆ.

ಪಾಕಿಸ್ತಾನದ ರಾಜಧಾನಿಯಲ್ಲಿರುವ ಎಫ್-8 ಪ್ರದೇಶದಿಂದ ನಬಿಯನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನಿ ಪೊಲೀಸರು ಮಾಧ್ಯಮ ಪ್ರಕಟನೆಯೊಂದರಲ್ಲಿ ಹೇಳಿದ್ದಾರೆ. ಅವರನ್ನು 1946ರ ವಿದೇಶೀಯರ ಕಾಯ್ದೆಯಡಿ ಬಂಧಿಸಲಾಗಿದೆ ಹಾಗೂ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇನ್ನೋರ್ವ ಭಾರತೀಯ ಕುಲಭೂಷಣ್ ಜಾಧವ್ ಪಾಕಿಸ್ತಾನದ ಕಸ್ಟಡಿಯಲ್ಲಿರುವುದು ಬಹಿರಂಗಗೊಂಡ ತಿಂಗಳುಗಳ ಬಳಿಕ ಈ ಹೊಸ ಪ್ರಕರಣ ವರದಿಯಾಗಿದೆ.

ಜಾಧವ್ ಪ್ರಕರಣ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಜಾಗತಿಕ ಮಟ್ಟದಲ್ಲಿ ಈಗಾಗಲೇ ಸಂಘರ್ಷಕ್ಕೆ ಕಾರಣವಾಗಿರುವುದನ್ನು ಸ್ಮರಿಸಬಹುದಾಗಿದೆ.

  ಜಾಧವ್‌ರನ್ನು ಸಂಘರ್ಷಪೀಡಿತ ಬಲೂಚಿಸ್ತಾನ ಪ್ರಾಂತದಿಂದ ಬಂಧಿಸಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಅವರು ಭಾರತದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದರು ಎಂಬ ಆರೋಪವನ್ನು ಹೊರಿಸಿ ಆ ದೇಶದ ಸೇನಾ ನ್ಯಾಯಾಲಯವು ಈ ವರ್ಷದ ಆದಿ ಭಾಗದಲ್ಲಿ ಮರಣ ದಂಡನೆ ವಿಧಿಸಿತ್ತು.

ಇದೀಗ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯವು ಮರಣ ದಂಡನೆಗೆ ತಡೆ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News