ಬ್ರಿಟನ್ ವಿಶ್ವವಿದ್ಯಾನಿಲಯದಿಂದ ಮುಸ್ಲಿಮ್ ಪ್ರಾರ್ಥನಾ ಸ್ಥಳ ತೆರವು: ವಿದ್ಯಾರ್ಥಿಗಳಿಂದ ಪ್ರತಿಭಟನೆ

Update: 2017-05-21 15:00 GMT

ಲಂಡನ್, ಮೇ 21: ಈಸ್ಟ್ ಆ್ಯಂಗ್ಲಿಯ ವಿಶ್ವವಿದ್ಯಾನಿಲಯ ಆವರಣದಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳ ಪ್ರಾರ್ಥನೆಗೆ ಮೀಸಲಾಗಿರಿಸಿದ್ದ ಸ್ಥಳವನ್ನು ತೆರವುಗೊಳಿಸಲು ವಿಶ್ವವಿದ್ಯಾನಿಲಯ ನಿರ್ಧರಿಸಿದೆ.

ಪರೀಕ್ಷಾ ಋತುವಿನಲ್ಲಿ ಎದುರಾಗಿರುವ ‘ಸ್ಥಳಾಭಾವ’ವೇ ತನ್ನ ಈ ನಿರ್ಧಾರಕ್ಕೆ ಕಾರಣ ಎಂದು ಅದು ಹೇಳಿದೆ.

ವಿಶ್ವವಿದ್ಯಾನಿಲಯದ ಆವರಣದಲ್ಲಿ ಲಭ್ಯವಿರುವ ಏಕೈಕ ಪ್ರಾರ್ಥನಾ ಸ್ಥಳವನ್ನು ಶಾಶ್ವತವಾಗಿ ತೆರವುಗೊಳಿಸಲಾಗುವುದು ಹಾಗೂ ಅಲ್ಲಿ ವಿಶ್ವವಿದ್ಯಾನಿಲಯದ ಗ್ರಂಥಾಲಯಕ್ಕೆ ಕಾರಿಡಾರ್ ನಿರ್ಮಿಸಲಾಗುವುದು ಎಂದು ‘ಇಂಡಿಪೆಂಡೆಂಟ್’ ವರದಿ ಮಾಡಿದೆ.

ರಮಝಾನ್ ಆರಂಭಕ್ಕೆ ಮುನ್ನ ವಿಶ್ವವಿದ್ಯಾನಿಲಯ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಪ್ರತಿಭಟನೆ ವ್ಯಕ್ತಪಡಿಸಿರುವ ಮುಸ್ಲಿಮ್ ವಿದ್ಯಾರ್ಥಿಗಳು, ಶನಿವಾರ ವಿಶ್ವವಿದ್ಯಾನಿಲಯದ ಪ್ರಧಾನ ಚೌಕದಲ್ಲಿ ಸಾರ್ವಜನಿಕ ಪ್ರಾರ್ಥನೆ ನಡೆಸಿದರು.

ಆಘಾತವಾಗಿದೆ: ಇಸ್ಲಾಮಿಕ್ ಸೊಸೈಟಿ

‘‘ಖಾಯಂ ಜಾಗವನ್ನು ನೀಡುವ ಶರತ್ತಿನಲ್ಲಿ ನಮ್ಮನ್ನು ಸ್ಥಳಾಂತರಿಸಿದ್ದ ವಿಶ್ವವಿದ್ಯಾನಿಲಯವು ಈವರೆಗೆ ನಮಗೆ ಪರಿಹಾರ ನೀಡಿಲ್ಲ. ಈಗ ನಮಗೆ ಲಭ್ಯವಿರುವ ಏಕೈಕ ಪ್ರಾರ್ಥನಾ ಸ್ಥಳವನ್ನು ಪರೀಕ್ಷಾ ಋತುವಿನಲ್ಲಿ ಮತ್ತು ರಮಝಾನ್‌ಗೆ ಪೂರ್ವಭಾವಿಯಾಗಿ ವಿಶ್ವವಿದ್ಯಾನಿಲಯ ತೆರವುಗೊಳಿಸುತ್ತಿರುವುದರಿಂದ ನಮಗೆ ಆಘಾತವಾಗಿದೆ’’ ಎಂದು ಈಸ್ಟ್ ಆ್ಯಂಗ್ಲಿಯ ವಿಶ್ವವಿದ್ಯಾನಿಲಯದ ಇಸ್ಲಾಮಿಕ್ ಸೊಸೈಟಿಯ ವಕ್ತಾರರೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News