ಯಕ್ಷಗಾನವು ರಾಮಯಾಣ, ಮಹಾಭಾರತವನ್ನು ತನಗೆ ಬೇಕಾದ ರೀತಿಯಲ್ಲಿ ಪುನರ್ ಕಟ್ಟಿಕೊಂಡಿದೆ: ಪುರುಷೋತ್ತಮ ಬಿಳಿಮಲೆ

Update: 2017-05-21 15:44 GMT

ಉಡುಪಿ, ಮೇ 21: ಯಕ್ಷಗಾನವು ರಾಮಯಾಣ ಮತ್ತು ಮಹಾಭಾರತ ವನ್ನು ತನಗೆ ಬೇಕಾದ ರೀತಿಯಲ್ಲಿ ಪುನರ್ ಕಟ್ಟಿಕೊಂಡಿದೆ. ಒಂದು ಪಠ್ಯವನ್ನು ನೂರಾರು ಪಠ್ಯಗಳಾಗಿ ಒಡೆದು ಕಾಲ, ಸಮುದಾಯ, ಪ್ರದೇಶಕ್ಕೆ ಅನುಗುಣವಾಗಿ ಪುನರ್‌ ಸೃಷ್ಠಿಸಿಕೊಂಡ ಮಹಾಲೋಕ ಯಕ್ಷಗಾನ. ಇದನ್ನು ನಾವು ಜಗತ್ತಿನ ಇತರ ಭಾಗಗಳಿಗೆ ಬೌದ್ಧಿಕವಾಗಿ ಹೇಳುವಂತಹ ಕಾಲ ಸನ್ನಿಹಿತವಾಗಿದೆ ಎಂದು ಹಿರಿಯ ಜಾನಪದ ವಿದ್ವಾಂಸ ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮಾರಕ ‘ಯಕ್ಷಗಾನ ವಿದ್ವಾಂಸ ಪ್ರಶಸ್ತಿ’ಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.

ಯಕ್ಷಗಾನವು ಒಂದು ಕತೆಯನ್ನು ಮತ್ತೆ ಮತ್ತೆ ಕಟ್ಟುತ್ತಿರುತ್ತದೆ. ಪಠ್ಯಗಳ ವಿಸ್ತರಣೆಗೆ ಯಕ್ಷಗಾನ ಬಹಳ ದೊಡ್ಡ ಕೊಡುಗೆ ನೀಡಿದೆ. ತಮಿಳುನಾಡು, ಆಂಧ್ರಪ್ರದೇಶ, ಹಿಮಾಲಯದ ತಪ್ಪಲಿನ ಪ್ರದೇಶದಲ್ಲಿಯೂ ರಾಮಾಯಣ ಹಾಗೂ ಮಹಾ ಭಾರತವನ್ನು ಪುನರ್‌ಕಟ್ಟಿಕೊಳ್ಳಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಯಕ್ಷಗಾನವನ್ನು ಕಲಾವಿದರು ದೊಡ್ಡ ಮಟ್ಟದಲ್ಲಿ ಬೆಳೆಸಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ಕೆಲಸ ಮಾಡುವ ವಿದ್ವಾಂಸರು ಈ ಕಲೆಯ ಮಹತ್ವವನ್ನು ವಿಶ್ವ ವೇದಿಕೆಯಲ್ಲಿ ಹೇಳಬೇಕಾಗಿದೆ. ಯಕ್ಷಗಾನಕ್ಕೆ ಎಲ್ಲರನ್ನು ಸೆಳಯುವ ಶಕ್ತಿ ಇದೆ. ಅದನ್ನು ಮುಟ್ಟಿಸುವ ಕೆಲಸ ನಾವು ಮಾಡಬೇಕು ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಹಿರಿಯ ಸಂಸ್ಕೃತಿ ಚಿಂತಕ ಏರ್ಯ ಲಕ್ಷ್ಮಿನಾರಾಯಣ ಆಳ್ವ ವಹಿಸಿದ್ದರು. ಸಾಹಿತ್ಯ ವಿಮರ್ಶಕ ತಾಳ್ತಜೆ ವಸಂತ ಕುಮಾರ್ ಅಭಿನಂದನಾ ಭಾಷಣ ಮಾಡಿದರು. ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ತಲ್ಲೂರು ಶಿವರಾಮ ಶೆಟ್ಟಿ, ಗಿರಿಜಾ ತಲ್ಲೂರು ಮುಖ್ಯ ಅತಿಥಿಗಳಾಗಿದ್ದರು.

ಕಲಾರಂಗದ ಉಪಾಧ್ಯಕ್ಷರಾದ ಗಂಗಾಧರ ರಾವ್, ಎಸ್.ವಿ.ಭಟ್ ಉಪಸ್ಥಿ ತರಿದ್ದರು. ಅಧ್ಯಕ್ಷ ಗಣೇಶ್ ರಾವ್ ಸ್ವಾಗತಿಸಿದರು. ನಾರಾಯಣ ಹೆಗಡೆ ಪ್ರಶಸ್ತಿ ಪತ್ರ ವಾಚಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

ಯಕ್ಷಗಾನದ ಬಗ್ಗೆ ಹಿಂದಿಯಲ್ಲಿ ಪುಸ್ತಕ ರಚನೆ: ಯಕ್ಷಗಾನದ ಕುರಿತು ಹಿಂದಿಯಲ್ಲಿ ಪುಸ್ತಕ ರಚಿಸುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಉತ್ತರ ಭಾರತದವರಿಗೆ ಯಕ್ಷಗಾನದ ಬಗ್ಗೆ ಏನು ತಿಳಿದಿಲ್ಲ. ಇಂಗ್ಲಿಷ್‌ನಲ್ಲಿ ಯಕ್ಷಗಾನ ಕುರಿತು ಈಗಾಗಲೇ ಪುಸ್ತಕ ರಚಿಸಲಾಗಿದೆ. ಆದರೆ ಹಿಂದಿಯಲ್ಲಿ ಈವರೆಗೆ ಬಂದಿಲ್ಲ. ಈ ಪ್ರಶಸ್ತಿಯಲ್ಲಿ ನೀಡಿರುವ ಹಣವನ್ನು ಹಿಂದಿಯಲ್ಲಿ ಹೊರತರುವ ಪುಸ್ತಕಕ್ಕೆ ವಿನಿಯೋಗಿಸಲಾಗುವುದು ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ಯಕ್ಷಗಾನ ನನ್ನ ಉಸಿರು. ನಾನು ಯಕ್ಷಗಾನ ಕಲಿತದ್ದು ಕಲಾವಿದನಾಗಬೇಕೆಂಬ ಕಾರಣಕ್ಕೆ ಅಲ್ಲ. ಕನ್ನಡೇತರರಿಗೆ ಯಕ್ಷಗಾನದ ಪರಿಚಯ ಮಾಡುವ ಉದ್ದೇಶದಿಂದ ಯಕ್ಷಗಾನದ ಜ್ಞಾನ ಸಂಪಾದಿಸಿದೆ ಎಂದು ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News