ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಯ ವಿರುದ್ಧ ಮೇಯರ್ ಕಿಡಿ
ಮಂಗಳೂರು, ಮೇ 21: ವಾಸ್ತವ ಸ್ಥಿತಿ ಅರಿಯದೇ ಮಾಲಿನ್ಯ ನಿಯಂತ್ರಣ ಅಧಿಕಾರಿ ರಾಜಶೇಖರ ಪುರಾಣಿಕ್ ಮನಪಾ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕೊಂಗೂರು ಮಠ ಮತ್ತು ಪಚ್ಚನಾಡಿ ರೇಚಕ ಸ್ಥಾವರದಲ್ಲಿ ಕೆಲವೊಮ್ಮೆ ತ್ಯಾಜ್ಯ ನೀರು ಓವರ್ ಫ್ಲೋ ಆದರೂ ಆ ನೀರು ನದಿಗೆ ಸೇರುವಷ್ಟು ಪ್ರಮಾಣದಲ್ಲಿರುವುದಿಲ್ಲ. ತೋಡಿನಲ್ಲಿ ಈಗ ನೀರಿನ ಹರಿವು ಇಲ್ಲ. ತ್ಯಾಜ್ಯ ನೀರು ಹರಿಯುತ್ತಿದ್ದರೆ ತೋಡಿನಲ್ಲಿ ಕಸಕಡ್ಡಿ, ತರಗೆಲೆ ಇರುತ್ತಿರಲಿಲ್ಲ. ಮಂಜಲ್ಪಾದೆಯಲ್ಲಿ ಶುದ್ದ ನೀರು ಹರಿಯುತ್ತಿದೆ. ಆದರೂ ನದಿಗೆ ತ್ಯಾಜ್ಯ ಬಿಡುವ ಕೈಗಾರಿಕಾ ಸಂಸ್ಥೆಗಳನ್ನು ರಕ್ಷಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ನಮ್ಮನ್ನು ತಪ್ಪಿತಸ್ಥರನ್ನಾಗಿ ಮಾಡಲು ಹೊರಟಿದ್ದಾರೆ. ಅದಕ್ಕಾಗಿ ವಾಸ್ತವ ಸ್ಥಿತಿ ತಿಳಿಸಲು ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ಮೇಯರ್ ಕವಿತಾ ಸನಿಲ್ ಹೇಳಿದರು.
ಕೊಂಗೂರು ರೇಚಕ ಸ್ಥಾವರ, ಪಚ್ಚನಾಡಿ ರೇಚಕ ಸ್ಥಾವರ, ಮೂಡುಶೆಡ್ಡೆಯಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕ, ಮಂಜಲ್ಪಾದೆ ಮತ್ತು ತ್ಯಾಜ್ಯ ನೀರು ಹರಿಯುತ್ತಿದೆ ಎನ್ನಲಾದ ತೋಡು ನದಿಗೆ ಸೇರುವ ಸ್ಥಳವನ್ನು ಮನಪಾ ಮೇಯರ್ ನೇತೃತ್ವದ ತಂಡ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳ ಸಮ್ಮುಖ ರವಿವಾರ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.
ನದಿ ಕಲುಷಿತಗೊಳ್ಳಲು ಪಾಲಿಕೆ ತ್ಯಾಜ್ಯ ನೀರು ಬಿಟ್ಟಿರುವುದೇ ಕಾರಣ ಎಂದು ಜಿಲ್ಲಾಧಿಕಾರಿ ಸಭೆ ಮತ್ತು ಮಾಧ್ಯಮಗಳಲ್ಲಿ ಹೇಳಿದ್ದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ರಾಜಶೇಖರ ಪುರಾಣಿಕ್, ಕೊಂಗೂರು ಮಠ ರೇಚಕ ಸ್ಥಾವರದಲ್ಲೂ ತನ್ನ ಮಾತು ಪುನರುಚ್ಚರಿಸಿ, ತ್ಯಾಜ್ಯ ನೀರು ಓವರ್ ಫ್ಲೋ ಆಗುತ್ತಿದೆ. ಈ ಬಗ್ಗೆ ತಾನು ಮನಪಾ ಆಯುಕ್ತರಿಗೆ ನೋಟಿಸ್ ನೀಡಿರುವುದಾಗಿ ಹೇಳಿದರು. ತನಗೆ ನೋಟಿಸ್ ಬಂದೇ ಇಲ್ಲ ಎಂದು ಮನಪಾ ಆಯುಕ್ತ ಮುಹಮ್ಮದ್ ನಝೀರ್ ಸ್ಪಷ್ಟಪಡಿಸಿದರು.
ಈ ಸಂದರ್ಭ ಆಕ್ರೋಶಗೊಂಡ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯೆಯೂ ಆದ ಮೇಯರ್, ರಾಜಶೇಖರ ಪುರಾಣಿಕ್ ಅವರನ್ನು ತೀವ್ರವಾಗಿ ತರಾಟೆಗೆತ್ತಿಕೊಂಡರು. ಯಾವುದೇ ದಾಖಲೆ ಇಲ್ಲದೆ ಪಾಲಿಕೆ ಮೇಲೆ ಏಕೆ ಆರೋಪ ಮಾಡುತ್ತೀರಿ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಕೈಗಾರಿಕೆಗಳನ್ನು ರಕ್ಷಿಸಲು ನಮ್ಮ ಮೇಲೆ ಗೂಬೆ ಕೂರಿಸುತ್ತೀರಿ ಎಂದು ನೇರ ಆರೋಪ ಮಾಡಿದರು. ಈ ಸ್ಥಳವನ್ನು ನೀವು ಇದೇ ಮೊದಲ ಬಾರಿ ವೀಕ್ಷಿಸುತ್ತಿದ್ದೀರಿ. ಆದರೂ ತ್ಯಾಜ್ಯ ನೀರು ಸೇರುತ್ತಿದೆ ಎಂದು ಹೇಗೆ ಆರೋಪ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಅಲ್ಲದೆ ಮರವೂರು ಅಣೆಕಟ್ಟು ಬಳಿ ಫಲ್ಗುಣಿ ನದಿ ನೀರು ಕಲುಷಿತಗೊಂಡು ಜಲಚರಗಳು ಸಾವನ್ನಪ್ಪಲು ಮನಪಾ ಕಾರಣವಲ್ಲ ಎಂಬ ಅಂಶವನ್ನು ಮೇಯರ್ ಕವಿತಾ ಸನಿಲ್ ಬೊಟ್ಟು ಮಾಡಿದರು.
ಬಳಿಕ ಮಾತನಾಡಿದ ರಾಜಶೇಖರ ಪುರಾಣಿಕ್ ನದಿ ನೀರು ಕಲುಷಿತಗೊಳ್ಳಲು ಮನಪಾ ಕಾರಣ ಎಂಬ ಮಾತನ್ನು ತಾನು ಎಲ್ಲೂ ಹೇಳಿಯೇ ಇಲ್ಲ. ಮಾಧ್ಯಮಗಳು ತಪ್ಪು ಬರೆದಿರಹುದು. ಜನವರಿಯಿಂದ ತ್ಯಾಜ್ಯ ನೀರು ಇಲ್ಲಿ ನದಿಗೆ ಸೇರುತ್ತಿದೆ ಎಂದರು.
ನಂತರ ಮಾತನಾಡಿದ ಪುರಾಣಿಕ್, ಕಲುಷಿತಗೊಂಡಿರುವ ನೀರು ಶುದ್ದಗೊಳಿಸಲು, ಆಮ್ಲಜನಕದ ಪ್ರಮಾಣ ಹೆಚ್ಚಿಸಲು ಅಣೆಕಟ್ಟೆಯ ಕೆಳಭಾಗದಲ್ಲಿ ಶನಿವಾರ ಹೈಡ್ರೋಜನ್ ಫೆರಾಕ್ಸೈಡ್ ಸಿಂಪರಣೆ ಮಾಡಲಾಗಿದೆ. ರವಿವಾರ ನೀರು ಭಾಗಶಃ ತಿಳಿಯಾಗಿದೆ. ನೀರು ಕಲುಷಿತಗೊಳ್ಳಲು ಕಾರಣ ಏನು ಎಂಬುದನ್ನು ತಿಳಿಯಲು ಮೀನುಗಾರಿಕಾ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಎನ್‌ಐಟಿಕೆ ಪ್ರತ್ಯೇಕ ಪರೀಕ್ಷೆ ನಡೆಸುತ್ತಿವೆ. ಮುಂದಿನ ಮೂರು ದಿನಗಳಲ್ಲಿ ಇದರ ವರದಿ ಬರಬಹುದು ಎಂದರು.
ಮನಪಾ ಸಚೇತಕ ಶಶಿಧರ ಹೆಗ್ಡೆ, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರವೂಫ್, ಇಂಜಿನಿಯರ್‌ಗಳಾದ ಗುರುರಾಜ್ ಮರಳಿಹಳ್ಳಿ, ರಘುಪಾಲ್ ಉಪಸ್ಥಿತರಿದ್ದರು.
ನೀರು ಮಾಲಿನ್ಯಕ್ಕೆ ಪಾಲಿಕೆ ಕಾರಣವಲ್ಲ ಎಂಬುದನ್ನು ಮಾಧ್ಯಮ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಸಮ್ಮುಖ ಸ್ಥಳ ಪರಿಶೀಲನೆ ನಡೆಸಿ ಸ್ಪಷ್ಟಪಡಿಸಿದ್ದೇವೆ. ಇನ್ನೂ ಸಂಶಯ ಇದ್ದರೆ ಮೂರನೇ ವ್ಯಕ್ತಿಯಿಂದ ಪರಿಶೀಲನೆ ನಡೆಸಲಿ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ನಮ್ಮ ಅನುಮತಿಯಿಲ್ಲದೆ ಕೈಗಾರಿಕಾ ಸಂಸ್ಥೆ ಪ್ರತಿನಿಧಿಗಳನ್ನು ಮನಪಾಕ್ಕೆ ಸೇರಿದ ರೇಚಕ ಸ್ಥಾವರ ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಕರೆದುಕೊಂಡು ಬಂದಿರುವುದು ತಪ್ಪು. ಕೈಗಾರಿಕಾ ಸಂಸ್ಥೆಗಳು ರಾತ್ರಿ 3ರಿಂದ 4ರ ನಡುವೆ ಫಲ್ಗುಣಿ ನದಿಗೆ ತ್ಯಾಜ್ಯ ನೀರು ಬಿಡುತ್ತಿವೆ. ನಾವು ಸ್ಥಳ ಪರಿಶೀಲನೆ ನಡೆಸಿದಂತೆ ಕೈಗಾರಿಕಾ ಸಂಸ್ಥೆಗಳಿಂದ ತ್ಯಾಜ್ಯ ಹರಿಯುವ ಪ್ರದೇಶದ ವಾಸ್ತವ ಅಂಶ ತಿಳಿಯಲು ಅಲ್ಲಿಗೆ ನಮ್ಮನ್ನು ಕೊರೆದುಕೊಂಡು ಹೋಗಲಿ
- ಕವಿತಾ ಸನಿಲ್, ಮನಪಾ ಮೇಯರ್