ಸಾಲಿಗ್ರಾಮ ಪ.ಪಂ., ಕಾಪು ಪುರಸಭೆ: ಯೋಜನೆಗಳಿಗೆ ಅರ್ಜಿ ಆಹ್ವಾನ

Update: 2017-05-21 18:27 GMT

ಉಡುಪಿ, ಮೇ 21: ಸಾಲಿಗ್ರಾಮ ಪಟ್ಟಣ ಪಂಚಾಯತ್ ಹಾಗೂ ಕಾಪು ಪುರಸಭೆ ವ್ಯಾಪ್ತಿಯ ಪ.ಜಾತಿ/ಪಂಗಡ, ಇತರೆ ಬಡ ಜನರಿಗೆ ಹಾಗೂ ವಿಕಲ ಚೇತನರ ಶ್ರೇಯೋಭಿವೃದ್ಧಿಗಾಗಿ ಎಸ್.ಎಫ್.ಸಿ. ಮತ್ತು ಪಟ್ಟಣ ಪಂಚಾಯತ್ ಹಾಗೂ ಪುರಸಭೆ ನಿಧಿಯಿಂದ 2017-18ನೆ ಸಾಲಿಗೆ ಹಮ್ಮಿಕೊಳ್ಳಲಾಗಿರುವ ವಿವಿಧ ಯೋಜನೆಗಳಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ.ಜಾತಿ/ಪಂಗಡದವರಿಗೆ ವಿದ್ಯಾರ್ಥಿ ವೇತನ(ಎಸೆಸೆಲ್ಸಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ) ಅಡುಗೆ ಅನಿಲ ಸಂಪರ್ಕ, ಪಕ್ಕಾಮನೆ ನಿರ್ಮಾಣ, ವೈದ್ಯಕೀಯ ಚಿಕಿತ್ಸೆಗಾಗಿ ಸಹಾಯಧನ ಹಾಗೂ ಸ್ವಯಂ ಉದ್ಯೋಗಕ್ಕಾಗಿ ಸಹಾಯಧನ ಮುಂತಾದ ಯೋಜನೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು.

ಇತರೆ ವರ್ಗದ ಜನರಿಗೆ ಅಡುಗೆ ಅನಿಲ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸ ಬಹುದು. ವಿಕಲಚೇತನರಿಗೆ ವಿದ್ಯಾರ್ಥಿ ವೇತನ, ವಿಕಲಚೇತನ ಸಾಧನ ಸಲಕರಣೆಗಳಿಗೆ ಸಹಾಯಧನ, ಅಡುಗೆ ಅನಿಲ ಸಂಪರ್ಕ, ತ್ರಿಚಕ್ರ ವಾಹನ (ಟ್ರೈಸ್ಕೂಟರ್), ವೈದ್ಯಕೀಯ ವೆಚ್ಚದ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿ ವೇತನಕ್ಕೆ ವಾರ್ಷಿಕ ಆದಾಯ 2.50 ಲಕ್ಷ ಹಾಗೂ ಇತರ ಯೋಜನೆಗಳಿಗೆ 3ಲಕ್ಷ ರೂ. ಮೀರಿರಬಾರದು.

ಅರ್ಹ ಅಭ್ಯರ್ಥಿಗಳು ರೇಶನ್ ಕಾರ್ಡ್, ಮತದಾರರ ಗುರುತಿನ ಚೀಟಿ, 2017-18ನೆ ಸಾಲಿನ ತೆರಿಗೆ ಪಾವತಿ ಪ್ರತಿ, ಜಾತಿ/ಆದಾಯ ಪ್ರಮಾಣಪತ್ರ, ಫೋಟೊ, ಆಧಾರ್ ಕಾರ್ಡ್ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

ವಿದ್ಯಾರ್ಥಿಗಳು ಹಿಂದಿನ ವರ್ಷದ ಅಂಕಪಟ್ಟಿ ಪ್ರತಿ ಹಾಗೂ ಪ್ರಸ್ತುತ ಸಾಲಿನ ವ್ಯಾಸಂಗ ದೃಢೀಕರಣ ಪತ್ರವನ್ನು ಸಲ್ಲಿಸಬೇಕು. ವಿಕಲಚೇತನರು ವಿಕಲಚೇತನ ದೃಢೀಕರಣ ಪತ್ರದ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು ಎಂದು ಮುಖ್ಯಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News