ಬೆಂಗರೆ ಕಸಬಾ ಶಾಲೆಯ 300 ವಿದ್ಯಾರ್ಥಿಗಳು ಅತಂತ್ರ

Update: 2017-05-21 18:30 GMT

ಮಂಗಳೂರು, ಮೇ 21: ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ರದ್ದುಗೊಳಿಸಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಇದರಿಂದ ಬೆಂಗರೆ ಕಸಬಾದ ಸರಕಾರಿ ಹಿ.ಪ್ರಾ. ಶಾಲೆಯ ಎಲ್‌ಕೆಜಿಯಿಂದ 2ನೆ ತರಗತಿಯವರೆಗೆ ಕಲಿಯುತ್ತಿರುವ ಸುಮಾರು 300 ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಈ ಮಧ್ಯೆ ಇಂಗ್ಲಿಷ್ ಮಾಧ್ಯಮ ಶಾಲೆಯ ಮಕ್ಕಳಂತೆ ಸಮವಸ್ತ್ರ, ಟೈ, ಶೂ ಇತ್ಯಾದಿಯನ್ನು ಧರಿಸಿ ಇನ್ನೇನು ಶಾಲೆಗೆ ತೆರಳಲು ಕಾಯುತ್ತಿರುವ ಮಕ್ಕಳು ಮತ್ತವರ ಹೆತ್ತವರು ಮುಂದೇನು ಮಾಡಬೇಕು ಎಂದು ತಿಳಿಯದೆ ಗೊಂದಲದಲ್ಲಿದ್ದಾರೆ.

ಬೆಂಗರೆ ಕಸಬಾ ಮುಸ್ಲಿಂ ಬಾಹುಳ್ಯವಿರುವ ಪ್ರದೇಶ. ಹೆಚ್ಚಿನವರು ಆರ್ಥಿಕವಾಗಿ ಹಿಂದುಳಿದವರು. 1958ರಲ್ಲಿ ಸ್ಥಾಪನೆಗೊಂಡ ಸರಕಾರಿ ಶಾಲೆಯಲ್ಲೇ ಇಲ್ಲಿನ ಮಕ್ಕಳು ಓದಿ ಬೆಳೆದವರು. ಇತ್ತೀಚೆಗೆ ಒಂದೆರಡು ಆಂಗ್ಲಮಾಧ್ಯಮ ಶಾಲೆಗಳು ಇಲ್ಲಿ ತೆರೆಯಲ್ಪಟ್ಟಿದ್ದರೂ ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳಿಗೆ ಕೊರತೆಯಿಲ್ಲ. ಆದರೂ ಭವಿಷ್ಯದ ಹಿತದೃಷ್ಟಿಯಿಂದ ಮತ್ತು ಕನ್ನಡ ಶಾಲೆಗಳ ಉಳಿವಿಗಾಗಿ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಎಸ್‌ಡಿಎಂಸಿ ಪದಾಧಿಕಾರಿಗಳನ್ನು ಹುರಿದುಂಬಿಸಿದ್ದರು.

 ಶ್ರೀಮಂತರ, ಮಧ್ಯಮ ವರ್ಗದ ಮಕ್ಕಳಂತೆ ತಮ್ಮ ಮಕ್ಕಳೂ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಕಲಿಯಲಿ ಎಂಬ ಅಭಿಲಾಷೆಯಂತೆ ಎಸ್‌ಡಿಎಂಸಿ ಪದಾಧಿಕಾರಿಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳ ಬಳಿ ಆಂಗ್ಲಮಾಧ್ಯಮ ತರಗತಿಯನ್ನು ತೆರೆಯಲು ಅವಕಾಶ ಕೋರಿದ್ದರು. ಅದರಂತೆ 2 ವರ್ಷದ ಹಿಂದೆ 1ನೆ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿಯನ್ನು ತೆರೆಯಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ವೌಖಿಕವಾಗಿ ಸೂಚಿಸಿದ್ದರು.

ಅಲ್ಲದೆ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ತೆರೆಯಲೂ ಅವಕಾಶ ಕಲ್ಪಿಸಿಕೊಟ್ಟಿದ್ದರು. ಅದರಂತೆ ಕಳೆದ 11 ವರ್ಷಗಳಿಂದ ಇಲ್ಲಿ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಜೂಲಿಯೆಟ್ ಪಿಂಟೋ ಮತ್ತು ಎಸ್‌ಡಿಎಂಸಿ ಪದಾಧಿಕಾರಿಗಳು ಬೆಂಗರೆ ಆಸುಪಾಸಿನ ಮಕ್ಕಳ ಮತ್ತು ಪೋಷಕರ ಮನವೊಲಿಸಿ ಶಾಲೆಗೆ ಸೇರ್ಪಡೆಗೊಳಿಸಲು ಪ್ರಯತ್ನಿಸಿದ್ದರು. ಯಾವುದೇ ಡೊನೇಶನ್ ನೀಡದೆ ಸರಕಾರಿ ಶಾಲೆಯಲ್ಲಿ ಉಚಿತ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಸಿಗುವುದಾದರೆ ಯಾಕೆ ಕೈ ಚೆಲ್ಲಬೇಕು ಎಂದು ಭಾವಿಸಿದ ಇಲ್ಲಿನ ನಿವಾಸಿಗಳು ಎಲ್‌ಕೆಜಿ, ಯುಕೆಜಿಗೆ ತಮ್ಮ ಮಕ್ಕಳನ್ನು ಸೇರಿಸತೊಡಿದರು. ಅದರ ಫಲವಾಗಿ ಇಲ್ಲಿ ಎಲ್‌ಕೆಜಿ, ಯುಕೆಜಿ, 1 ಮತ್ತು 2ನೆ ತರಗತಿಯಲ್ಲಿ ಸುಮಾರು 300 ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ. ಇದಲ್ಲದೆ ಕನ್ನಡ ಮಾಧ್ಯಮದ 430 ಮಕ್ಕಳು 1ರಿಂದ 8ನೆ ತರಗತಿಯಲ್ಲಿ ಕಲಿಯುತ್ತಿದ್ದಾರೆ. 14 ಮಂದಿ ನುರಿತ ಶಿಕ್ಷಕರೂ ಇದ್ದಾರೆ. ಅಲ್ಲದೆ ಐದಾರು ಮಂದಿ ಗೌರವ ಶಿಕ್ಷಕರೂ ಇದ್ದಾರೆ.

ಹೀಗೆ ಎಲ್ಲರೂ ಸೇರಿ ಸರಕಾರಿ ಶಾಲೆಯನ್ನು ಮುನ್ನಡೆಸುತ್ತಿರುವಾಗಲೇ ಅಂದು ವೌಖಿಕವಾಗಿ ಅದೇಶ ನೀಡಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಂದು ಲಿಖಿತ ಆದೇಶ ನೀಡಿ ಎಲ್‌ಕೆಜಿ, ಯುಕೆಜಿ ರದ್ದುಗೊಳಿಸಲು ಮುಂದಾಗಿರುವುದು ವಿದ್ಯಾರ್ಥಿಗಳ ಹಾಗೂ ಪೋಷಕರ ಆಕ್ರೋಶ ವನ್ನು ಹೆಚ್ಚಿಸಿದೆ.

ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಡಿ.ಸಿದ್ದರಾಮಯ್ಯ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲಿಸಿ ಸರಕಾರಿ ಶಾಲೆಯಲ್ಲಿ ಆಂಗ್ಲಮಾಧ್ಯಮ ತರಗತಿ ತೆರೆಯುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದರು. ಅದರಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಲವಾರು ಶಾಲೆಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಈ ಮಧ್ಯೆ ಬೆಂಗರೆ ಶಾಲೆಯ ಎಸ್‌ಡಿಎಂಸಿ ಪದಾಧಿಕಾರಿಗಳು ನ್ಯಾಯ ಕೋರಿ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಬಳಿ ತೆರಳಿದಾಗ ಅಲ್ಲೂ ಸಹೃದಯ ಸ್ಪಂದನೆ ಸಿಗಲಿಲ್ಲ. ಹಾಗಾಗಿ ವಿದ್ಯಾರ್ಥಿಗಳು, ಪೋಷಕರು ಕಂಗಾಲಾಗಿದ್ದಾರೆ.

ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸುವುದರ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘವೂ ವಿರೋಧ ವ್ಯಕ್ತಪಡಿಸಿತ್ತು. ಆದರೆ ಅದು ಅಷ್ಟೊಂದು ತೀವ್ರತೆ ಪಡೆದಿರಲಿಲ್ಲ. ಈ ಮಧ್ಯೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಆದೇಶದಂತೆ ಶಿಕ್ಷಣ ಇಲಾಖೆಯು ಕ್ರಮಕ್ಕೆ ಮುಂದಾಗುವುದು ಅನಿವಾರ್ಯವಾಗಿದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕಿದೆ.

  • ಇಂದು ಪ್ರತಿಭಟನೆ

ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ರದ್ದುಗೊಳಿಸಬೇಕು ಎಂಬ ಶಿಕ್ಷಣ ಇಲಾಖೆಯ ಆದೇಶವನ್ನು ಖಂಡಿಸಿ ಮೇ 22ರಂದು ಬಿ.ಸಿ.ರೋಡ್ ಜಂಕ್ಷನ್‌ನಲ್ಲಿ ಎಸ್‌ಡಿಎಂಸಿ ಸಂಘಟನೆಯು ಪ್ರತಿಭಟನೆ ನಡೆಸಲಿದೆ.

ಮಂಗಳೂರಿನ ಬಹುತೇಕ ಖಾಸಗಿ ಶಾಲೆಗಳು ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಅಕ್ರಮವಾಗಿ ಇಂಗ್ಲಿಷ್ ಮಾಧ್ಯಮ ಶಾಲೆ ನಡೆಸುತ್ತಿವೆ. ಅವರ ಮೇಲೆ ಸರಕಾರ, ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕನ್ನಡ ಪರ ಸಂಸ್ಥೆಗಳಲ್ಲಿ ಗುರುತಿಸಿಕೊಂಡವರ ಮಕ್ಕಳು, ಮೊಮ್ಮಕ್ಕಳೇ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ತೆರಳುತ್ತಿದ್ದಾರೆ. ಇವರಿಗೆಲ್ಲಾ ಹುದ್ದೆ, ಸ್ಥಾನಮಾನಕ್ಕಾಗಿ ಇಂತಹವುಗಳು ಬೇಕು. ಆರ್ಥಿಕವಾಗಿ ಹಿಂದುಳಿದವರು ಕನ್ನಡ ಮಾಧ್ಯಮದಲ್ಲಿ ಕಲಿತು ಮತ್ತಷ್ಟು ಹಿಂದುಳಿಯಬೇಕು ಎಂದು ಇವರೆಲ್ಲಾ ಭಾವಿಸಿದಂತಿದೆ. ಇದಕ್ಕೆಲ್ಲಾ ಹೋರಾಟವೇ ಪರಿಹಾರ.

ಮುನೀರ್ ಕಾಟಿಪಳ್ಳ, ಅಧ್ಯಕ್ಷರು, ಡಿವೈಎಫ್‌ಐ ಕರ್ನಾಟಕ ರಾಜ್ಯ ಸಮಿತಿ

ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣ ಸಿಗಬೇಕು. ಅದು ಬಿಟ್ಟು ಶ್ರೀಮಂತರ ಮಕ್ಕಳು ಇಂಗ್ಲಿಷ್ ಮತ್ತು ಬಡವರ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯಬೇಕು ಎಂದರೆ ಯಾವ ನ್ಯಾಯ? ಈ ರಾಜಕಾರಣಿಗಳು, ಅಧಿಕಾರಿಗಳು ಸೂಟ್‌ಕೇಸ್‌ನ ಆಸೆಗಾಗಿ ಬಡವರ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಮಾರ್ಚ್-ಎಪ್ರಿಲ್‌ನಲ್ಲೇ ಈ ಬಗ್ಗೆ ಆದೇಶ ಹೊರಡಿಸಿದ್ದರೆ ನಾವು ನಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಕಳುಹಿಸಿಕೊಡುತ್ತಿದ್ದೆವು. ಈಗ ಏನು ಮಾಡುವುದು? ಈಗಾಗಲೇ ನಮ್ಮ ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಶೂ, ಚೀಲ ಎಲ್ಲವನ್ನೂ ಖರೀದಿಸಲಾಗಿದೆ. ಅದನ್ನೆಲ್ಲಾ ಏನು ಮಾಡುವುದು? ಆದ ನಷ್ಟಕ್ಕೆ ಯಾರು ಪರಿಹಾರ ಕೊಡುತ್ತಾರೆ? ಜಿಲ್ಲಾಧಿಕಾರಿ ಬಳಿ ತೆರಳಿ ನ್ಯಾಯ ಕೇಳಿದರೆ ಅವರು ಅಮಾನವೀಯವಾಗಿ ವರ್ತಿಸಿ ದರು. ನಮ್ಮ ಮೇಲೆಯೇ ಕೇಸು ದಾಖಲಿಸುವ ಬೆದರಿಕೆ ಹಾಕಿದರು? ಜಿಲ್ಲಾಧಿಕಾರಿಯೇ ಹೀಗೆ ಮಾತನಾಡಿದರೆ ನಾವಿನ್ನು ಯಾರಲ್ಲಿ ನ್ಯಾಯ ಕೇಳಲಿ?.

ಕೈರುನ್ನಿಸಾ, ಅಧ್ಯಕ್ಷೆ,

ಶಾಲಾಭಿವೃದ್ಧಿ ಸಮಿತಿ, ಬೆಂಗರೆ ಕಸಬ

ಶಿಕ್ಷಣ ಇಲಾಖೆಯ ಹಿಂದಿನ ಅಧಿಕಾರಿಗಳು ಎಲ್‌ಕೆಜಿ, ಯುಕೆಜಿ ತೆರೆಯಲು ವೌಖಿಕವಾಗಿ ಸೂಚಿಸಿದ್ದರು. ಅದರಂತೆ ನಾವು ಆಂಗ್ಲಮಾಧ್ಯಮ ಆರಂಭಿಸಿದ್ದೆವು. ಅದನ್ನು ಜಿಲ್ಲಾಧಿಕಾರಿ ಬಳಿ ವಿವರಿಸುವಾಗ ನನಗೆ ಅದೆಲ್ಲಾ ಗೊತ್ತಿಲ್ಲ. ತರಗತಿಯನ್ನು ಮುಚ್ಚಿ ಎಂದು ನೇರವಾಗಿ ಹೇಳಿದರು. ನಮ್ಮ ಮಕ್ಕಳ ಭವಿಷ್ಯ ಏನು? ನಮಗೆ ಸರಕಾರದ ಯಾವ ಸೌಲಭ್ಯವೂ ಬೇಡ. ನಾವೇ ಹಣ ಹಾಕಿ ನಮ್ಮ ಮಕ್ಕಳನ್ನು ಓದಿಸುತ್ತೇವೆ. ನಮಗೆ ತರಗತಿ ಮುಂದುವರಿಸಲು ಅನುಮತಿ ಕೊಡಿ ಎಂದು ಕೇಳಿದೆವು. ಆದರೆ, ಜಿಲ್ಲಾಧಿಕಾರಿ ಸ್ಪಂದಿಸಲಿಲ್ಲ. ಎಲ್ಲ ಪ್ರಕ್ರಿಯೆಯನ್ನು ಶಿಕ್ಷಣ ಸಚಿವರ ತಲೆಗೆ ಹಾಕಿದರು. ಶ್ರೀಮಂತರು ಖಾಸಗಿ ಶಾಲೆಗೆ ಹೋಗಲಿ, ಬಡವರಿಗೆ ಕನ್ನಡ ಮಾಧ್ಯಮದ ಸರಕಾರಿ ಶಾಲೆ ಸಾಕು ಎಂದು ಅವಮಾನಿಸಿದರು. ಮತ್ತೂ ವಿನಂತಿಸಿದಾಗ ಶಾಲಾಭಿವೃದ್ಧಿ ಸಮಿತಿಯವರನ್ನೇ ಜೈಲಿಗೆ ಹಾಕುವುದಾಗಿ ಗದರಿಸಿ ನಮ್ಮನ್ನು ಹೊರಗಡೆ ಕಳಿಸಿದರು. ಜಿಲ್ಲಾಧಿಕಾರಿಯಿಂದ ನಾವು ಇಂತಹ ಮಾತನ್ನು ನಿರೀಕ್ಷಿಸಿರಲಿಲ್ಲ.

ನೌಷಾದ್ ಬೆಂಗರೆ, ಅಧ್ಯಕ್ಷರು, ಡಿವೈಎಫ್‌ಐ ಬೆಂಗರೆ ನಗರ ಘಟಕ

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News