ಚಕ್ಕುಲಿ ಕದ್ದಿದ್ದಕ್ಕಾಗಿ ಪುಟ್ಟಮಕ್ಕಳಿಬ್ಬರ ತಲೆ ಬೋಳಿಸಿ ಬೆತ್ತಲೆ ಮೆರವಣಿಗೆ ಮಾಡಿದರು
ಉಲ್ಲಾಸನಗರ(ಮಹಾರಾಷ್ಟ್ರ),ಮೇ 22: ಮುಂಬೈ ಸಮೀಪದ ಉಲ್ಲಾಸನಗರದಲ್ಲಿ ಶನಿವಾರ ಎಂಟು ಮತ್ತು ಒಂಭತ್ತು ವರ್ಷ ಪ್ರಾಯದ ಇಬ್ಬರು ಮಕ್ಕಳನ್ನು ಬೆತ್ತಲೆಗೊಳಿಸಿ, ತಲೆಬೋಳಿಸಿ ಬಳಿಕ ಕುತ್ತಿಗೆಗೆ ಚಪ್ಪಲಿ ಹಾರಗಳನ್ನು ತೊಡಿಸಿ ಮೆರವಣಿಗೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ. ಇಷ್ಟಕ್ಕೂ ಆ ಮಕ್ಕಳು ಮಾಡಿದ್ದ ತಪ್ಪೆಂದರೆ ಅಂಗಡಿ ಯೊಂದರಿಂದ ಚಕ್ಕುಲಿ ಪ್ಯಾಕೆಟ್‌ನ್ನು ಕದ್ದಿದ್ದು! ಮಕ್ಕಳನ್ನು ಥಳಿಸಿ ಅವಮಾನಿಸಿದ ಆರೋಪಿ ಅಂಗಡಿಕಾರರು ತಮ್ಮ ‘ಸಾಧನೆ’ಯನ್ನು ಮೊಬೈಲ್ ಪೋನ್‌ಗಳಲ್ಲಿ ಚಿತ್ರೀಕರಿಸಿಕೊಂಡಿದ್ದರು.
ಜನರ ಗುಂಪೊಂದರ ಕಣ್ಣೆದುರೇ ಈ ಘಟನೆ ನಡೆದಿದ್ದರೂ, ಬಾಲಕರ ಮೇಲಿನ ಹಲ್ಲೆಯನ್ನು ತಡೆಯಲು ಯಾರೂ ಮುಂದಾಗಿರಲಿಲ್ಲ ಎನ್ನುವುದು ನಿಜಕ್ಕೂ ಆಘಾತಕಾರಿ ಯಾಗಿದೆ.
ಉಲ್ಲಾಸನಗರದ ಪ್ರೇಮನಗರ ಪ್ರದೇಶದಲ್ಲಿಯ ತಮ್ಮ ಮನೆಯ ಬಳಿ ಆಟವಾಡುತಿದ್ದ ಮಕ್ಕಳು ಸಮೀಪದಲ್ಲಿರುವ ಮೆಹಮೂದ್ ಪಠಾಣ್ ಎಂಬಾತನ ಬೇಕರಿಗೆ ತೆರಳಿ ಚಕ್ಕುಲಿಯ ಪ್ಯಾಕೆಟ್ ಕದ್ದಿದ್ದರು. ಇದನ್ನು ಕಂಡಿದ್ದ ಆತ ಅವರಿಗೆ ಪಾಠ ಕಲಿಸುವಂತೆ ತನ್ನ ಮಕ್ಕಳಾದ ಇರ್ಫಾನ್ ಮತ್ತು ಸಲೀಂ ಅವರಿಗೆ ಸೂಚಿಸಿದ್ದ. ಅವರಿಬ್ಬರೂ ಮಕ್ಕಳನ್ನು ಹಿಡಿದು ಅಂಗಡಿಗೆ ಎಳೆದು ತಂದಿದ್ದರು. ಬಳಿಕ ಅವರ ತಲೆಗಳನ್ನು ಭಾಗಶಃ ಬೋಳಿಸಿ ಅವರದೇ ಚಪ್ಪಲಿಗಳ ಹಾರ ತೊಡಿಸಿದ ನಂತರ ಬೆತ್ತಲೆಗೊಳಿಸಿ ರಸ್ತೆ ತುಂಬ ಮೆರವಣಿಗೆ ಮಾಡಿದ್ದಾರೆ.
ಇರ್ಫಾನ್ ಬಾಲಕರಿಬ್ಬರಿಗೂ ಹಲವಾರು ಬಾರಿ ತಪರಾಕಿಗಳನ್ನು ನೀಡಿದ್ದು, ಸಲೀಂ ಇದನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ. ಈ ವೀಡಿಯೊವೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ಮಕ್ಕಳ ಪೋಷಕರ ದೂರುಗಳ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಮೆಹಮೂದ್(62),ಇರ್ಫಾನ್(26) ಮತ್ತು ಸಲೀಂ(22) ಅವರನ್ನು ಬಂಧಿಸಿದ್ದಾರೆ.