ವರದಕ್ಷಿಣೆ ನೀಡದ್ದಕ್ಕಾಗಿ ಮಹಿಳೆಯ ತಲೆಬೋಳಿಸಿ, ಅರೆಬೆತ್ತಲೆ ಮೆರವಣಿಗೆ ನಡೆಸಿದ ಕಿರಾತಕರು!

Update: 2017-05-22 12:40 GMT

ಪಶ್ಚಿಮ ಬಂಗಾಳ, ಮೇ 22: ಕೇಳಿದಷ್ಟು ವರದಕ್ಷಿಣೆ ನೀಡಲಿಲ್ಲ ಎಂದು 10 ವರ್ಷದ ಬಾಲಕನ ತಾಯಿಯ ತಲೆಬೋಳಿಸಿದ ಪತಿ ಹಾಗೂ ಆತನ ಮನೆಯವರು ಆಕೆಯನ್ನು ಅರೆಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ಘಟನೆ ಪಶ್ಚಿಮ ಬಂಗಾಳದ ಗ್ರಾಮವೊಂದರಲ್ಲಿ ನಡೆದಿದೆ.

ದೌರ್ಜನ್ಯದಿಂದ ಅಸ್ವಸ್ಥಗೊಂಡ ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದು, ಆಕೆಯನ್ನು ಕಿರಾತಕರು ಮೈದಾನವೊಂದರಲ್ಲಿ ಬಿಟ್ಟು ತೆರಳಿದ್ದಾರೆ. ಈ ಬಗ್ಗೆ ನೆರೆಮನೆಯವರು ಮಹಿಳೆಯ ಪೋಷಕರಿಗೆ ಮಾಹಿತಿ ನೀಡಿದ್ದು, ಬಳಿಕ ಆಕೆಯನ್ನು ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತು,.

ಸುಮಾರು 30 ಸಾವಿರ ರೂ. ವರದಕ್ಷಿಣೆಗಾಗಿ ಮಹಿಳೆಗೆ ಕಿರುಕುಳ ನೀಡಲಾಗುತ್ತಿತ್ತು” ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. “ನನ್ನ ಮೇಲೆ ದೌರ್ಜನ್ಯ ನಡೆಸಿದ ಅವರು ಬಟ್ಟೆಯನ್ನು ಹರಿದು ಹಾಕಿದರು. ನಂತರ ತಲೆಬೋಳಿಸಿ ಮೆರವಣಿಗೆ ನಡೆಸಿದರು. ಪತಿಗೆ ಎರಡನೆ ಮದುವೆ ಮಾಡುವುದಕ್ಕಾಗಿ ಅವರು ನನ್ನಲ್ಲಿ ಹಣ ಕೇಳುತ್ತಿದ್ದರು.” ಎಂದು ಮಹಿಳೆ ದೂರಿದ್ದಾರೆ.

ಘಟನೆಗೆ ಸಂಬಂಧಿಸಿ ಮಹಿಳೆಯ ಪತಿ ಹಾಗೂ ಮಾವನನ್ನು ಬಂಧಿಸಲಾಗಿದ್ದು, ಪ್ರಕರಣದಲ್ಲಿ ಶಾಮೀಲಾದ ಅತ್ತೆ ಹಾಗೂ ಇತರ ಸಂಬಂಧಿಕರು ತಲೆಮರೆಸಿಕೊಂಡಿದ್ದಾರೆ.

“ಬಂಧಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತಲೆಮರೆಸಿಕೊಂಡವರ ಶೋಧಕಾರ್ಯ ನಡೆಯುತ್ತಿದೆ” ಎಂದು ಪೊಲೀಸ್ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News