ಬ್ಯಾರಿ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ

Update: 2017-05-22 13:25 GMT

ಮಂಗಳೂರು, ಮೇ 22: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಪ್ರಕಟಿಸಿದ ಶತ ಬ್ಯಾರಿ ಕವಿಗಳ ಕವನ ಗುಚ್ಛ ‘ಬ್ಯಾರಿ ಕಾವ್ಯ ಸಂಪುಟ’ ಕೃತಿಯ ಬಿಡುಗಡೆ ಕಾರ್ಯಕ್ರಮವು ಸೋಮವಾರ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.

ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಬ್ಯಾರಿ ಭಾಷೆಯಲ್ಲಿ ನೂರು ಕವಿಗಳಿರುವುದು ಸಾಹಿತ್ಯಕ್ಕೆ ಸಲ್ಲುವ ಗೌರವವಾಗಿದೆ. ಮುಂದಿನ ದಿನಗಳಲ್ಲಿ ಸಾವಿರ ಬ್ಯಾರಿ ಕವಿಗಳು ಹುಟ್ಟಿ ಬರಲಿ. ಸಾಹಿತ್ಯ ರಚನೆಯು ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಸಾಹಿತ್ಯದ ಮೂಲದ್ರವ್ಯವಿಲ್ಲದಿದ್ದರೆ ಭಾಷೆ ಬೆಳೆಯದು ಎಂದು ಆಶಿಸಿದರಲ್ಲದೆ, ಕುಡುಪು ಗ್ರಾಮದ ಬೈತುರ್ಲಿಯಲ್ಲಿ ನಿರ್ಮಾಣಗೊಳ್ಳಲಿರುವ ಬ್ಯಾರಿ ಸಾಹಿತ್ಯ ಭವನಕ್ಕೆ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಕಳೆದ ಬಜೆಟ್‌ನಲ್ಲಿ ಮಂಡಿಸಲಾದ ಮಂಗಳೂರು ವಿವಿಯಲ್ಲಿ ಸ್ಥಾಪಿಸಲಾಗುವ ಬ್ಯಾರಿ ಅಧ್ಯಯನ ಪೀಠಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು. ಬ್ಯಾರಿ ಸಾಹಿತ್ಯ ಭವನ ನಿರ್ಮಾಣಕ್ಕೆ ಇತರ ಇಲಾಖೆಗಳ ಸಹಾಯಧನ ಪಡೆಯಲು ಸಹಕರಿಸಲಾಗುವುದು ಎಂದರಲ್ಲದೆ, ಆರ್ಥಿಕವಾಗಿ ಹಿಂದುಳಿದ ಸಾಹಿತಿಗಳಿಗೆ ಪಿಂಚಣಿ ನೀಡುವ ಬಗ್ಗೆ ಮುಖ್ಯಮಂತ್ರಿಯ ಜೊತೆ ಸಮಾಲೋಚನೆ ಮಾಡಲಾಗುವುದು ಎಂದರು.

 ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಬಿ.ಎ. ಮುಹಮ್ಮದ್ ಹನೀಫ್ ಬ್ಯಾರಿ-ಕನ್ನಡ-ಇಂಗ್ಲಿಷ್ ಭಾಷೆಯನ್ನೊಳಗೊಂಡ ನಿಘಂಟನ್ನು ಜುಲೈಯಲ್ಲಿ ಬಿಡುಗಡೆಗೊಳಿಸಲಾಗುವುದು. ವಿದ್ಯಾರ್ಥಿಗಳು ಸಂಶೋಧಿಸಿ ಬರೆದ ಪ್ರಬಂಧವನ್ನು ಒಗ್ಗೂಡಿಸಿ ಪುಸ್ತಕ ಹೊರತರಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಬ್ಯಾರಿ ಅಕಾಡಮಿಯ ಮಾಜಿ ಅಧ್ಯಕ್ಷ ರಹೀಂ ಉಚ್ಚಿಲ್, ಸಾಹಿತಿಗಳಾದ ಬಿ.ಎ.ಮುಹಮ್ಮದ್ ಅಲಿ, ಮುಹಮ್ಮದ್ ಬಡ್ಡೂರು, ಬಿ.ಎ.ಶಂಶುದ್ದೀನ್ ಮಡಿಕೇರಿ ಭಾಗವಹಿಸಿದ್ದರು.

ಸಾಹಿತಿ ಪೇರೂರು ಜಾರು ಕೃತಿಯ ಪ್ರಥಮ ಪ್ರತಿ ಸ್ವೀಕರಿಸಿದರು. ಪತ್ರಕರ್ತ ಹಂಝ ಮಲಾರ್ ಕೃತಿ ಪರಿಚಯ ಮಾಡಿದರು. ಅಕಾಡಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಸದಸ್ಯರಾದ ಮುಹಮ್ಮದ್ ಶರೀಫ್ ನಿರ್ಮುಂಜೆ ಆಶಯಗೀತೆ ಹಾಡಿದರು. ಮುಹಮ್ಮದ್ ಝಕರಿಯಾ ಕಲ್ಲಡ್ಕ ವಂದಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಬ್ಯಾರಿ ಸಾಹಿತ್ಯ ಭವನದ ಜಮೀನಿನ ದಾಖಲೆಯನ್ನು ಅಕಾಡಮಿಯ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಬ್ಯಾರಿ ಕಾವ್ಯ ಸಂಪುಟದ ಸಂಪಾದಕ ಬಶೀರ್ ಅಹ್ಮದ್ ಕಿನ್ಯಾ, 2015ನೆ ಸಾಲಿನ ಬ್ಯಾರಿ ಗೌರವ ಪುರಸ್ಕೃತರಾದ ಅಬ್ದುಲ್ಲತೀಫ್ ಪುತ್ತೂರು, ತುಳು ಅಕಾಡಮಿಯ ಮಾಜಿ ಅಧ್ಯಕ್ಷೆ ಜಾನಕಿ ಎಂ.ಬ್ರಹ್ಮಾವರ, ಕೊಂಕಣಿ ಅಕಾಡಮಿಯ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ ಅವರನ್ನು ಗೌರವಿಸಲಾಯಿತು.
ಬ್ಯಾರಿ ಕಾವ್ಯ ಸಂಪುಟದ ಕವಿಗಳನ್ನು ಅಭಿನಂದಿಸಲಾಯಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News