ಚೀನಾದ ಹೊಟೇಲಲ್ಲಿ ಬಾಕಿಯಾದ ಭಾರತೀಯ ವೈದ್ಯರು, ಕುಟಂಬ

Update: 2017-05-22 13:32 GMT

ಬೀಜಿಂಗ್, ಮೇ 22: ಚೀನಾದ ಶೆಂಝನ್‌ನ ಹೊಟೇಲೊಂದರಲ್ಲಿ ಸಿಕ್ಕಿಹಾಕಿಕೊಂಡಿರುವ 25 ಭಾರತೀಯ ವೈದ್ಯರು ಮತ್ತು ಅವರ ಕುಟುಂಬ ಸದಸ್ಯರು ಇಂದು ಮಕಾವುಗೆ ಹೊರಟಿದ್ದಾರೆ.

ಅವರು ತಂಗಿದ್ದ ಹೊಟೇಲ್‌ನ ಬಿಲ್ ಪಾವತಿ ವಿಚಾರದಲ್ಲಿ ವಿವಾದವೇರ್ಪಟ್ಟಿತ್ತು. ಈಗ ವಿವಾದ ಇತ್ಯರ್ಥಗೊಂಡಿದ್ದು ಭಾರತೀಯರು ತಮ್ಮ ಪ್ರವಾಸವನ್ನು ಮುಂದುವರಿಸಿದ್ದಾರೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದರು.

ಮುಂಬೈಯ ಮಲಾಡ್ ಮೆಡಿಕಲ್ ಅಸೋಸಿಯೇಶನ್ (ಎಂಎಂಎ)ಗೆ ಸೇರಿದ ವೈದ್ಯರು ಗುವಾಂಗ್‌ಡಾಂಗ್ ಪ್ರಾಂತದ ಹೊಟೇಲೊಂದರಲ್ಲಿ ತಂಗಿದ್ದರು. ಸಂಪೂರ್ಣ ಬಿಲ್ಲನ್ನು ಪಾವತಿಸುವಂತೆ ಒತ್ತಾಯಿಸಿ ನಿನ್ನೆ ವೈದ್ಯರು ಮತ್ತು ಅವರ ಕುಟುಂಬಿಕರನ್ನು ಅವರ ಹೊಟೇಲ್ ಕೋಣೆಗಳಿಂದ ತೆರವುಗೊಳಿಸಿ ಲಾಬಿಯಲ್ಲಿ ಉಳಿಯುವಂತೆ ಮಾಡಲಾಗಿತ್ತು.

ಚೀನಾ ಪ್ರವಾಸ ಕೈಗೊಂಡಿರುವ ವೈದ್ಯರು ಮತ್ತು ಅವರ ಕುಟುಂಬಿಕರ ಪರವಾಗಿ ಮುಂಬೈಯ ಟೂರ್ ಆಪರೇಟರ್ ಸಂಸ್ಥೆಯೊಂದು ಚೀನಾದ ಟ್ರಾವೆಲ್ ಏಜನ್ಸಿಯೊಂದಕ್ಕೆ ಹಣ ಪಾವತಿಸಬೇಕಾಗಿತ್ತು. ಆದರೆ, ಅದು ಹಣ ಪಾವತಿಸಿರಲಿಲ್ಲ.

ಬಿಲ್ ಪಾವತಿಯಾಗುವವರೆಗೆ ಪ್ರವಾಸಿಗರು ಭಾರತಕ್ಕೆ ಹಿಂದಿರುಗುವ ವ್ಯವಸ್ಥೆ ಮಾಡಲು ಚೀನಾದ ಟ್ರಾವೆಲ್ ಸಂಸ್ಥೆ ನಿರಾಕರಿಸಿತ್ತು. ಭಾರತೀಯ ಪ್ರವಾಸ ಏಜಂಟ್ ಸಮಯಕ್ಕೆ ಸರಿಯಾಗಿ ಹಣ ಪಾವತಿಸದಿರುವುದು ಇದಕ್ಕೆ ಕಾರಣವಾಗಿತ್ತು.

ಅವರು ತಮ್ಮ ಪ್ರವಾಸದ ಭಾಗವಾಗಿ ಮಕಾವುನತ್ತ ಪ್ರಯಾಣಿಸಿದ್ದಾರೆ ಎಂದು ಗುವಾಂಗ್‌ಝೂನಲ್ಲಿರುವ ಭಾರತೀಯ ಕಾನ್ಸುಲೇಟ್‌ನ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News