ಭಾರತ ಭಯೋತ್ಪಾದನೆಯ ಬಲಿಪಶು: ಅರಬ್-ಇಸ್ಲಾಮಿಕ್-ಅಮೆರಿಕ ಶೃಂಗಸಭೆಯಲ್ಲಿ ಟ್ರಂಪ್

Update: 2017-05-22 13:46 GMT

ರಿಯಾದ್, ಮೇ 22: ಭಾರತ ಭಯೋತ್ಪಾದನೆಯ ಬಲಿಪಶುವಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಹಾಗೂ ತಮ್ಮ ನೆಲದಲ್ಲಿ ಭಯೋತ್ಪಾದಕ ಗುಂಪುಗಳು ಆಶ್ರಯ ಪಡೆಯದಂತೆ ಖಾತರಿಪಡಿಸುವಂತೆ ಅವರು ದೇಶಗಳಿಗೆ ಕರೆ ನೀಡಿದ್ದಾರೆ.

ಇಲ್ಲಿ ರವಿವಾರ ಅರಬ್-ಇಸ್ಲಾಮಿಕ್-ಅಮೆರಿಕ ಶೃಂಗಸಭೆಯಲ್ಲಿ ಭಾಷಣ ಮಾಡಿದ ಟ್ರಂಪ್, ‘‘ಯುರೋಪ್‌ನ ದೇಶಗಳೂ ಅವರ್ಣನೀಯ ಭಯಾನಕತೆಯನ್ನು ಸಹಿಸಿಕೊಂಡಿವೆ. ಅದೇ ರೀತಿ ಆಫ್ರಿಕ ಮತ್ತು ದಕ್ಷಿಣ ಅಮೆರಿಕದ ದೇಶಗಳು, ಭಾರತ, ರಶ್ಯ, ಚೀನಾ, ಆಸ್ಟ್ರೇಲಿಯ ಮುಂತಾದ ದೇಶಗಳು ಭಯೋತ್ಪಾದನೆಯ ಬಲಿಪಶುಗಳಾಗಿವೆ’’ ಎಂದು ಹೇಳಿದರು.

ಈ ಶೃಂಗಸಭೆಯಲ್ಲಿ 50 ಮುಸ್ಲಿಮ್ ಬಾಹುಳ್ಯದ ದೇಶಗಳ ನಾಯಕರು ಭಾಗವಹಿಸುತ್ತಿದ್ದಾರೆ.

‘‘ತಮ್ಮ ನೆಲದಲ್ಲಿ ಭಯೋತ್ಪಾದಕರು ಆಶ್ರಯ ಪಡೆಯದಂತೆ ಪ್ರತಿಯೊಂದು ದೇಶ ಖಾತರಿಪಡಿಸಬೇಕು’’ ಎಂದು ಪಾಕಿಸ್ತಾನವನ್ನು ಹೆಸರಿಸದೆ ಅವರು ಹೇಳಿದರು.

ವಿದೇಶಿ ನೆಲದಲ್ಲಿ ತನ್ನ ಚೊಚ್ಚಲ ಭಾಷಣ ಮಾಡಿದ ಟ್ರಂಪ್, ಮಧ್ಯಪ್ರಾಚ್ಯದಿಂದ ಹೊರಹೊಮ್ಮುತ್ತಿರುವ ತೀವ್ರವಾದದ ವಿರುದ್ಧ ಹೋರಾಡುವಂತೆ ಅವರು ಈ ವಲಯದ ದೇಶಗಳಿಗೆ ಕರೆ ನೀಡಿದರು.

ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ‘ಒಳ್ಳೆಯದು ಮತ್ತು ಕೆಟ್ಟದರ ನಡುವಿನ ಸಮರ’ ಎಂದು ಬಣ್ಣಿಸಿದ ಟ್ರಂಪ್, ಅದು ‘ಪಶ್ಚಿಮದ ದೇಶಗಳು ಮತ್ತು ಇಸ್ಲಾಮ್ ವಿರುದ್ಧದ ಹೋರಾಟವಲ್ಲ’ ಎಂದರು.

ಭಯೋತ್ಪಾದನೆಯನ್ನು ಮೂಲೋತ್ಪಾಟನೆಗೊಳಿಸುವ ನಿಟ್ಟಿನಲ್ಲಿ, ಈ ವಲಯದಲ್ಲಿ ಅಮೆರಿಕ ಯಾವ ಪಾತ್ರ ವಹಿಸಬೇಕೆಂಬುದನ್ನು ನಿರ್ಧರಿಸಬೇಕಾದ ಅಗತ್ಯವಿದೆ ಎಂದು ಟ್ರಂಪ್ ಹೇಳಿದರು.

ಉಗ್ರವಾದದ ವಿರುದ್ಧ ಜಾಗತಿಕ ಕೇಂದ್ರಕ್ಕೆ ಚಾಲನೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಸೌದಿ ಅರೇಬಿಯದ ದೊರೆ ಸಲ್ಮಾನ್ ಬಿನ್ ಅಬ್ದುಲಝೀಝ್ ರವಿವಾರ ಉಗ್ರವಾದಿ ಸಿದ್ಧಾಂತದ ವಿರುದ್ಧ ಹೋರಾಡುವ ನೂತನ ಜಾಗತಿಕ ಕೇಂದ್ರವೊಂದನ್ನು ಉದ್ಘಾಟಿಸಿದರು.

ಕೇಂದ್ರದ ಪ್ರಧಾನ ಕಚೇರಿಯು ಸೌದಿ ಅರೇಬಿಯದ ರಾಜಧಾನಿ ರಿಯಾದ್‌ನಲ್ಲಿದ್ದು, ವಿಶೇಷವಾಗಿ ಇಂಟರ್‌ನೆಟ್‌ನಲ್ಲಿ ಮೂಲಭೂತವಾದಿ ಸಿದ್ಧಾಂತದ ವಿರುದ್ಧ ಹೋರಾಡುವುದು ಇದರ ಗುರಿಯಾಗಿದೆ.

ಭಯೋತ್ಪಾದನೆಗೆ ಹಣ ಪೂರೈಕೆ ವಿರುದ್ಧ ಹೋರಾಡುವ ಇನ್ನೊಂದು ಕೇಂದ್ರದ ಸ್ಥಾಪನೆಗಾಗಿ ಅಮೆರಿಕ ಮತ್ತು ಕೊಲ್ಲಿ ಸಹಕಾರ ಮಂಡಳಿ (ಜಿಸಿಸಿ)ಯ ಸದಸ್ಯ ದೇಶಗಳು ರವಿವಾರ ಇನ್ನೊಂದು ಒಪ್ಪಂದಕ್ಕೂ ಸಹಿ ಹಾಕಿವೆ.

ಟ್ರಂಪ್‌ರ 2 ದಿನಗಳ ಇಸ್ರೇಲ್ ಭೇಟಿ ಆರಂಭ

ಟೆಲ್ ಅವೀವ್ (ಇಸ್ರೇಲ್), ಮೇ 22: ಸೌದಿ ಅರೇಬಿಯ ಪ್ರವಾಸವನ್ನು ಮುಗಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೋಮವಾರ ಎರಡು ದಿನಗಳ ಇಸ್ರೇಲ್ ಪ್ರವಾಸಕ್ಕಾಗಿ ಟೆಲ್ ಅವೀವ್‌ಗೆ ಆಗಮಿಸಿದ್ದಾರೆ.

ಟ್ರಂಪ್ ಮತ್ತು ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಏರ್‌ಫೋರ್ಸ್ ವನ್ ವಿಮಾನದಲ್ಲಿ ಸೌದಿ ಅರೇಬಿಯದಿಂದ ಹೊರಟು ಟೆಲ್ ಅವೀವ್ ಸಮೀದಪ ಲಾಡ್‌ನಲ್ಲಿರುವ ಬೆನ್ ಗುರಿಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News