×
Ad

ಉಚ್ಚಿಲ ಸಾರ್ವಜನಿಕ ರುದ್ರಭೂಮಿ ಕಾಮಗಾರಿಗೆ ಅಡ್ಡಿಪಡಿಸಿದರೆ ಪ್ರತಿಭಟನೆ

Update: 2017-05-22 20:47 IST

ಉಡುಪಿ, ಮೇ 22: ಸರಕಾರಿ ಜಾಗದಲ್ಲಿರುವ ಸಾರ್ವಜನಿಕ ರುದ್ರಭೂಮಿ ನಿರ್ಮಾಣ ಕಾಮಗಾರಿಗೆ ಅಡ್ಡಿಪಡಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಕಾಮಗಾರಿಯನ್ನು ನಿಲ್ಲಿಸಿದರೆ ಅಥವಾ ಅಡ್ಡಿಪಡಿಸಿದರೆ ಪ್ರತಿಭಟನೆ ನಡೆಸುವುದಲ್ಲದೇ, ಉಚ್ಚಿಲ ಚಲೋ ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ಉಡುಪಿ ಜಿಲ್ಲಾ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟ ಎಚ್ಚರಿಕೆ ನೀಡಿದೆ.

ಆದಿಉಡುಪಿಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಇಂದು ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಸುಂದರ್ ಮಾಸ್ಟರ್ ಹಾಗೂ ಜಿಲ್ಲಾಧ್ಯಕ್ಷ ಉದಯಕುಮಾರ್ ತಲ್ಲೂರ್, ಬುದ್ದಿವಂತರ ಜಿಲ್ಲೆ ಎಂದು ಬೆನ್ನು ತಟ್ಟಿಕೊಳ್ಳುವ ಜಿಲ್ಲೆಯಲ್ಲಿ ದಲಿತರ ಶವ ಸಂಸ್ಕಾರ ಮಾಡಲು ಅಸ್ಪೃಶ್ಯತೆಯನ್ನು ಆಚರಣೆ ಮಾಡುವವರ ವಿರುದ್ಧ ಜಿಲ್ಲಾಡಳಿತ ದಲಿತ ದೌರ್ಜನ್ಯ ತಡೆ ಕಾಯ್ದೆ ಹಾಗೂ ಗೂಂಡಾ ಕಾಯ್ದೆ ಅಡಿ ಕ್ರಮಕೈಗೊಂಡು ಗಡಿಪಾರು ಮಾಡಬೇಕು ಎಂದರು.

ಉಚ್ಚಿಲ ಬಡಾ ಗ್ರಾಮದಲ್ಲಿರುವ ಈ ಹಿಂದು ರುದ್ರಭೂಮಿಯ ಕಾಮಗಾರಿ ಜಾತಿವಾದಿಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಯಿಂದಾಗಿ ನೆನೆಗುದಿಗೆ ಬಿದ್ದಿದೆ. ಕಾಮಗಾರಿಗೆ ಮತ್ತೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತಕ್ಕೆ ಜಿಲ್ಲಾ ದಸಂಸ ಸಂಘಟನೆಗಳ ಒಕ್ಕೂಟ ಅಭಿನಂದನೆ ಸಲ್ಲಿಸುತ್ತದೆ ಎಂದವರು ಹೇಳಿದರು. 

ಕಾಮಗಾರಿ ನಡೆಸಲು ಅಡಚಣೆ ಮಾಡುವ ಸ್ಥಳೀಯ ಜನರ ಮೇಲೆ ಸರಕಾರಿ ಕಾಮಗಾರಿಗೆ ಅಡ್ಡಿ ಪಡಿಸುವ ಹಾಗೂ ಸರಕಾರಿ ಸಶ್ಮಾನ ಭೂಮಿಯಲ್ಲಿ ಕೂಲಿ ಕಾರ್ಮಿಕರನ್ನು ಮತ್ತು ವಾಹನಗಳನ್ನು ಬಿಟ್ಟು ನಿರ್ಬಂಧಿತ ಸ್ಥಳಕ್ಕೆ ಯಾರೂ ಪ್ರವೇಶಿಸದಂತೆ ನಿರ್ಬಂಧ ಹೇರಿ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿ ಮಾಡಿ ಕಾಮಗಾರಿ ನಡೆಸಲು ಅವಕಾಶ ಮಾಡಿಕೊಡಬೇಕು ಎಂದವರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿದರು.
 

ಉಚ್ಚಿಲದ ಬಡಾ ಗ್ರಾಮದ ಸರ್ವೇ ನಂಬರ್ 160/1ರಲ್ಲಿ 1.56 ಎಕರೆ ಭೂಮಿ ಬ್ರಿಟಿಷರ ಕಾಲದಿಂದಲೂ ಸ್ಮಶಾನಕ್ಕಾಗಿ ಕಾದಿರಿಸಿದ ಭೂಮಿಯಾಗಿದ್ದು, ಸ್ಥಳೀಯರು ಇದನ್ನು ಸ್ಮಶಾನಕ್ಕೆ ನೀಡಬಾರದೆಂದು ಜಿಲ್ಲಾಧಿಕಾರಿ ನ್ಯಾಯಾಲಯ ಮತ್ತು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಉಚ್ಛ ನ್ಯಾಯಾಲಯ ಈ ದಾವೆಯನ್ನು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಬಗೆಹರಿಸಿ ಕೊಳ್ಳಲು ಆದೇಶಿಸಿದಂತೆ ಅಲ್ಲಿ ಈ ಭೂಮಿಯನ್ನು ಸ್ಮಶಾನಕಕೆ ಕಾದಿರಿಸಿ ಆದೇಶ ಹೊರಡಿಸಲಾಗಿದೆ ಎಂದು ಸುಂದರ ಮಾಸ್ಟರ್ ವಿವರಿಸಿದರು.

ಸ್ಥಳೀಯ ಒಂದು ಸಮುದಾಯ ಜಾತಿ ರಾಜಕಾರಣ ಮಾಡುವುದನ್ನು ಬಿಟ್ಟು ಸಾರ್ವಜನಿಕವಾಗಿ ಎಲ್ಲಾ ಸಮುದಾಯಕ್ಕೂ ಶವ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದಿರುವ ಒಕ್ಕೂಟದ ಪದಾಧಿಕಾರಿಗಳು, ಜಾತಿವಾದಿಗಳು ರಾಜಕೀಯ ದುರ್ಲಾಭ ಪಡೆಯುವ ಉದ್ದೇಶದಿಂದ ಸಾಮಾಜಿಕ ಸೌಹಾರ್ದತೆಯನ್ನು ಕೆಡಿಸುವುದನ್ನು ಖಂಡಿಸುತ್ತೇವೆ ಎಂದರು.

ಗ್ರಾಮದಲ್ಲಿ 50ಕ್ಕೂ ಅಧಿಕ ದಲಿತ ಕುಟುಂಬಗಳಿದ್ದು, 300ಕ್ಕೂ ಅಧಿಕ ಮಂದಿ ಇದ್ದಾರೆ.ಉಚ್ಚಿಲ ಮತ್ತು ಎರ್ಮಾಳಿನ ದಲಿತ ಕೇರಿಗಳಿಗೆ ಅವರ ಶವ ಸಂಸ್ಕಾರಕ್ಕೆ ಈ ಸಶ್ಮಾನದ ಅಗತ್ಯವಿದ್ದು, ಸರಕಾರ ಇದಕ್ಕೆ ಅವಕಾಶ ನೀಡಿರುವುದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ಸಾರ್ವಜನಿಕ ರುದ್ರಭೂಮಿಯನ್ನು ಇಟ್ಟುಕೊಂಡು ಜಾತಿವಾದಿ ಶಕ್ತಿಗಳು ಇದಕ್ಕೆ ರಾಜಕೀಯ ರೂಪ ನೀಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಉದಯಕುಮಾರ್ ತಲ್ಲೂರ್ ಹೇಳಿದರು.

ಈ ಹಿಂದೆಯೂ ದಲಿತ ಶವ ಸಂಸ್ಕಾರಕ್ಕೆ ಅವಕಾಶ ನೀಡದೇ ಇದೇ ಜಾತಿವಾದ ರಾಜಕೀಯ ಶಕ್ತಿಗಳು ಇದಕ್ಕೆ ಕುಮ್ಮಕ್ಕು ನೀಡಿ ಅಡ್ಡಿಪಡಿಸಿವೆ. ಕಾಪುವಿನ ಮಾಜಿ ಶಾಸಕ ಲಾಲಾಜಿ ಮೆಂಡನ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಇವರು ತಮ್ಮ ರಾಜಕೀಯ ಆಟವನ್ನು ನಿಲ್ಲಿಸಬೇಕು ಎಂದು ಸುಂದರ್ ಮಾಸ್ಟರ್ ತಿಳಿಸಿದರು.

 ಹಿಂದೆಯೂ ಇವರು ಸಾರ್ವಜನಿಕ ಆಕ್ಷೇಪಣೆ ಸಲ್ಲಿಸಿ ಕಾಮಗಾರಿಗೆ ತಡೆ ಒಡ್ಡಿದ್ದಾರೆ. ಒಂದು ಸಮುದಾಯವನ್ನು ದಲಿತರ ವಿರುದ್ಧ ಎತ್ತಿಕಟ್ಟಿ ಅವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತಿದ್ದಾರೆ ಎಂದರು. ಒಂದು ಕಿ.ಮೀ. ದೂರದಲ್ಲಿರುವ ಕಟ್ಟಿಂಗೇರಿಯಲ್ಲಿ ಬೇಕಿದ್ದರೆ ಇನ್ನೊಂದು ಸ್ಮಶಾನ ನಿರ್ಮಿಸಿ ನಮ್ಮ ಆಕ್ಷೇಪವೇನಿಲ್ಲ. ಆದರೆ ದಲಿತರಿಗೆ ಇಲ್ಲೂ ಅವಕಾಶ ಸಿಗಬೇಕು. ಇಲ್ಲಿ ಅಸ್ಪೃಶ್ಯತೆ ಆಚರಣೆಯನ್ನು ನಾವು ಯಾವ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

ಕರಾವಳಿ ಜಿಲ್ಲೆಯಲ್ಲಿ ದಲಿತ ಸಮುದಾಯ ಹಾಗೂ ಮೊಗವೀರ ಸಮುದಾಯದ ನಡುವೆ ಉತ್ತಮ ಬಾಂಧವ್ಯ ಹಾಗೂ ಸೌಹಾರ್ದತೆ ಇದ್ದು, ಇಲ್ಲಿ ರಾಜಕೀಯ ಹಸ್ತಕ್ಷೇಪದಿಂದಾಗಿ ಇಂಥ ಪರಿಸ್ಥಿತಿ ಉಂಟಾಗಿದೆ ಎಂದವರು ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಶ್ಯಾಮರಾಜ್ ಬಿರ್ತಿ, ನಾರಾಯಣ ಮಣೂರು, ಎಸ್.ಎಸ್.ಪ್ರಸಾದ್, ವಿಶ್ವನಾಥ ಪೇತ್ರಿ, ಚಂದ್ರ ಅಲ್ತಾರು, ಶ್ಯಾಮಸುಂದರ್ ತೆಕ್ಕಟ್ಟೆ ಮುಂತಾದವರು ಉಪಸ್ಥಿತರಿದ್ದರು.

ಪೇಜಾವರಶ್ರೀಗಳೇ ನಿಲುವು ತಿಳಿಸಿ
ದಲಿತರ ಕುರಿತಂತೆ ಆಗಾಗ ಮಾತನಾಡುವ, ದಲಿತರ ಕೇರಿಗಳಿಗೆ ಹೋಗಿ ಪಾದಪೂಜೆ ಸ್ವೀಕರಿಸುವ ಪೇಜಾವರ ಶ್ರೀಗಳು, ದಲಿತರ ಬಗ್ಗೆ ನೈಜ ಕಾಳಜಿ ಇದ್ದರೆ ಹಿಂದೂ ರುದ್ರಭೂಮಿಯಲ್ಲಿ ದಲಿತರಿಗೆ ಅವಕಾಶ ನೀಡುವ ಕುರಿತು ತಮ್ಮ ನಿಲುವು ಸ್ಪಷ್ಟ ಪಡಿಸಬೇಕು ಎಂದು ಸುಂದರ ಮಾಸ್ಟರ್ ಹಾಗೂ ಉದಯಕುಮಾರ್ ತಲ್ಲೂರು ಹೇಳಿದರು.
ಹಿಂದೂ ನಾವೆಲ್ಲ ಒಂದು ಎನ್ನುವ ಹಿಂದೂ ಸಂಘಟನೆಗಳು ಈ ಬಗ್ಗೆ ಮೌನ ಮುರಿದು ಮಾತನಾಡಬೇಕು ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News