×
Ad

ಮೇ 23: ದೃಷ್ಟಿ ಕಳೆದುಕೊಂಡ ಹುಸೇನ್‌ರ 4ನೇ ಕೃತಿ ಲೋಕಾರ್ಪಣೆ

Update: 2017-05-22 20:51 IST

ಉಡುಪಿ, ಮೇ 22: ಎಂಟು ವರ್ಷಗಳ ಹಿಂದೆ ಅಪಘಾತದಲ್ಲಿ ತನ್ನ ದೃಷ್ಟಿ ಕಳೆದುಕೊಂಡು ಶೇ.100 ಅಂಧರಾದ ಟಿ.ಎಸ್. ಹುಸೇನ್‌ರ ಸಾಹಸ ಹಾಗೂ ಜೀವನ ಪ್ರೀತಿಯ ದ್ಯೋತಕವಾದ ಅವರ 4ನೇ ಕೃತಿ ‘ಕನಸಿನ ಹಾದಿಯಲ್ಲಿ’ ಮೇ 23ರಂದು ಕಾಪುವಿನ ನಾರಾಯಣಗುರು ಬಿಲ್ಲವರ ಸಭಾಭವನದಲ್ಲಿ ಬಿಡುಗಡೆಗೊಳ್ಳಲಿದೆ.

ಸೋಮವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಟಿ.ಎಸ್.ಹುಸೇನ್ ಅವರು ತನ್ನ ಕೃತಿ ಹಾಗೂ ಜೀವನಗಾಥೆಯನ್ನು ಪತ್ರಕರ್ತರೆದುರು ತೆರೆದಿಟ್ಟರು.

ದ.ಕ.ಜಿಲ್ಲೆಯ ತೋಕೂರಿನ ಕಾನದ ನಿವಾಸಿಯಾದ ಹುಸೇನ್ (51) ಜೀವನೋಪಾಯಕ್ಕಾಗಿ ಸಣ್ಣ ಲೇವಾದೇವಿ ವ್ಯವಹಾರ ಮಾಡಿಕೊಂಡಿದ್ದರು. 2008ರಲ್ಲಿ ಮುದರಂಗಡಿಯ ಹಲಸಿನಕಟ್ಟೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ತನ್ನೆರಡೂ ಕಣ್ಣುಗಳ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡರು. ಸಂಪೂರ್ಣ ಕತ್ತಲು ಕವಿದ ಬದುಕಿನಲ್ಲಿ ಜೀವನೋತ್ಸಾಹ ಕಳೆದುಕೊಳ್ಳದ ಹುಸೇನ್ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲದಿಂದ ತನ್ನ ಯೋಚನಾ ಶಕ್ತಿಯನ್ನು ಬಳಸಿಕೊಂಡು ಸಾಹಿತ್ಯ ಕೃತಿ ರಚಿಸುವ ದೃಢ ಸಂಕಲ್ಪ ಮಾಡಿದರು.
 

ಮಗಳ ಸಹಾಯಹಸ್ತ: ಮೊದಲೇ ತನಗಿದ್ದ ಸಾಹಿತ್ಯಾಸಕ್ತಿಯಿಂದ ತಾನೂ ಸಾಹಿತಿಯಾಗವು ಮನಸ್ಸು ಮಾಡಿದ ಹುಸೇನ್, ತನ್ನ ಕಲ್ಪನಾ ಸಾಮರ್ಥ್ಯವನ್ನು ಒರೆಗೆ ಹಚ್ಚಿ ಬೇರೆಯವರ ನೆರವಿನಿಂದ 2014ರಲ್ಲಿ ತನ್ನ ಮೊದಲ ಕೃತಿ ‘ಗ್ರಹಣ’ ಹಾಗೂ ‘ಮರಳಿ ಬಾ ಮನಸ್ಸೆ’ ರಚಿಸಿದರು. ಇದಾದ ಬಳಿಕ 2016ರಲ್ಲಿ ‘ಮುಗಿಲು ಮುಟ್ಟದ ಪ್ರಣಯ’ ಎನ್ನುವ ಕೃತಿ ಬರೆದು ರಾಜ್ಯದ 22 ಜಿಲ್ಲೆಗಳನ್ನು ಸುತ್ತಿ ಒಟ್ಟು 15 ಸಾವಿರ ಪ್ರತಿಗಳನ್ನು ಮಾರಾಟ ಮಾಡುವ ಸಾಹಸ ಮಾಡಿದರು.

ಇದೀಗ ಅವರು ತನ್ನ ನಾಲ್ಕನೇ ಕೃತಿಗೆ ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿರುವ ಮಗಳ ಸಹಾಯವನ್ನು ಪಡೆದಿದ್ದಾರೆ. ತನ್ನ ಕಲ್ಪನೆಗಳನ್ನು ಹುಸೇನ್ ಹೇಳುತ್ತಿರುವಂತೆ ಅಕ್ಷರ ರೂಪಕ್ಕಿಳಿಸಿದ ಮಗಳು ಹಾಗೂ ಮನೆಯ ಉಳಿದ ಸದಸ್ಯರ ನೆರವಿನಿಂದ ಇದೀಗ ನಾಲ್ಕನೇ ಕೃತಿ ಪುಸ್ತಕ ರೂಪದಲ್ಲಿ ಬಿಡುಗಡೆ ಕಾಣಲಿದೆ ಎಂದರು.

ತನ್ನೀ ಸಾಹಸಕ್ಕೆ ಸರಕಾರದ ವಿಶೇಷ ನೆರವನ್ನು ನಿರೀಕ್ಷಿಸುತ್ತಿರುವುದಾಗಿ ಹೇಳಿದ ಹುಸೇನ್, ಕಾಪು ಶಾಸಕ ವಿನಯಕುಮಾರ್ ಸೊರಕೆ ಅವರು ಸರಕಾರದ ನೆರವಿನ ಭರವಸೆ ನೀಡಿದ್ದಾರೆ ಎಂದರು. ಕಾಪುವಿನ ಬಿಲ್ಲವರ ಸಂಘದ ನಾರಾಯಣಗುರು ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯುಸಿಸಿಎಲ್‌ನ ಕಿಶೋರ್ ಆಳ್ವ ಅವರು ಕೃತಿ ಬಿಡುಗಡೆಗೊಳಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮ್ಮದ್, ಎಂ.ಜಿ.ನಾಗೇಂದ್ರ, ಪವನ್ ಕುಮಾರ್, ಆಸಿಫ್ ಪಡುಬಿದ್ರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News