ಹಿರಿಯಡ್ಕ ಸಬ್‌ ಜೈಲಿನಲ್ಲಿ ಹೊಡೆದಾಟ: ಓರ್ವ ಕೈದಿಗೆ ಗಾಯ, ಆಸ್ಪತ್ರೆಗೆ ದಾಖಲು

Update: 2017-05-22 16:18 GMT

ಉಡುಪಿ, ಮೇ 22: ಹಿರಿಯಡಕದ ಅಂಜಾರಿನಲ್ಲಿರುವ ಜಿಲ್ಲಾ ಸಬ್‌ ಜೈಲಿನಲ್ಲಿ ಕೈದಿಗಳ ನಡುವೆ ರವಿವಾರ ರಾತ್ರಿ ಹೊಡೆದಾಟ ನಡೆದಿದ್ದು, ಕಾಸರಗೋಡಿನ ಟೋನಿ (30) ಎಂಬಾತ ಸಹಕೈದಿಗಳಿಂದ ಏಟು ತಿಂದು ಆಸ್ಪತ್ರೆಗೆ ದಾಖಲಾದ ಜೈಲು ನಿವಾಸಿಯಾಗಿದ್ದಾರೆ.

ಹಲ್ಲೆಗೊಳಗಾಗಿರುವ ಟೋನಿಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿರುವ ಕೈದಿಗಳ ಚಿಕಿತ್ಸಾ ಸೆಲ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಟೋನಿ ಮುಖದ ಮೇಲೆ ಸಹಕೈದಿಗಳು ಏಟಿನ ಪ್ರಹಾರ ನಡೆಸಿದ್ದು, ಇದರಿಂದ ಮುಖದಲ್ಲಿ ಗಾಯಗಳಾಗಿರುವುದಲ್ಲದೇ ಅವರ ಎರಡು ಹಲ್ಲು ಗಳು ಸಹ ಉದುರಿ ಹೋಗಿವೆ. ಸೊಂಟಕ್ಕೂ ಪೆಟ್ಟಾಗಿದೆ. ನಡೆದಾಡಲು ಕಷ್ಟಪಡುತ್ತಿದ್ದಾನೆ ಎಂದು ತಿಳಿದುಬಂದಿದೆ.

ಐಪಿಎಲ್ ಮ್ಯಾಚ್‌ವೇಳೆ ಹಲ್ಲೆ: ಘಟನೆ ರವಿವಾರ ರಾತ್ರಿ ಐಪಿಎಲ್ ಫೈನಲ್ ಪಂದ್ಯದ ವೇಳೆ ನಡೆದಿದೆ. ಇಲ್ಲಿನ ಸಬ್‌ಜೈಲಿನ ಕೈದಿಗಳ ಬ್ಯಾರಕ್‌ನಲ್ಲಿ ಸುಮಾರು 30-35 ಮಂದಿ ಇದ್ದು, ರವಿವಾರ ರಾತ್ರಿ ಮುಂಬೈ ಇಂಡಿಯನ್ ಹಾಗೂ ಪುಣೆ ತಂಡಗಳ ಮಧ್ಯೆ ಐಪಿಎಲ್ ಪಂದ್ಯ ನಡೆದಿತ್ತು. ಕೈದಿಗಳೆಲ್ಲರೂ ಪಂದ್ಯ ವೀಕ್ಷಣೆಯಲ್ಲಿದ್ದರು. ಈ ಸಂದರ್ಭದಲ್ಲಿ ಟಿವಿ ರಿಮೋಟ್ ವಿಚಾರಕ್ಕೆ ಸಂಬಂಧಿಸಿ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಮ್ಯಾಚ್ ಮುಗಿದ ಬಳಿಕ ಟೋನಿ ಟಿ.ವಿ. ಸೌಂಡ್ ಜಾಸ್ತಿ ಇಟ್ಟದ್ದಕ್ಕಾಗಿ ಸಿಟ್ಟಿಗೆದ್ದ ಸಹ ಕೈದಿಗಳು ಬಡಿದಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಗಾಯಗೊಂಡ ಕೈದಿ ಟೋನಿ ಹೇಳುವಂತೆ, ಪಂದ್ಯ ಮುಗಿದ ಬಳಿಕ ಇತರ ಕೈದಿಗಳ ಜೊತೆಗೆ ತನ್ನ ಬಳಿ ಆಗಮಿಸಿದ ಸಹಕೈದಿ ಪ್ರಶಾಂತ್, ಇದು ನಮ್ಮ ರಾಜ್ಯ ಕರ್ನಾಟಕ. ನನ್ನನ್ನು ಅಣ್ಣಾ ಎಂದು ಕರೆಯಬೇಕು. 10 ಸಾವಿರ ರೂ. ಹಣವನ್ನು ನೀನು ನೀಡಬೇಕು ಎಂದು ಹೇಳಿದ. ಅದಕ್ಕೆಲ್ಲ ನಾನು ಒಪ್ಪದೇ ಇದ್ದಾಗ ಕೈಗೆ ಸಿಕ್ಕಿದ ಕೇರಂ ಬೋರ್ಡ್, ಚೆಂಬು ಹಾಗೂ ಇತರ ಸೊತ್ತುಗಳಿಂದ ಹಲವರು ಸೇರಿ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದಿದ್ದಾನೆ.

 ಮಂಗಳೂರಿನಲ್ಲಿದ್ದ ಕೈದಿ: ಮಂಗಳೂರು ಜೈಲಿನಲ್ಲಿದ್ದ ಟೋನಿ ಮೂಲತ: ಕಾಸರಗೋಡಿನವನು. ಇತ್ತೀಚೆಗಷ್ಟೇ ಹಿರಿಯಡಕ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಈತ ವಿಚಿತ್ರ ವ್ಯಕ್ತಿತ್ವದ ಕೈದಿ. ಕೇರಳ ಸಹಿತ ವಿವಿಧೆಡೆಗಳಲ್ಲಿ ಈತನ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದವು. ಈತನ ಜಗಳಗಂಟಿ ಸ್ವಭಾವದಿಂದಾಗಿ ಶಿವಮೊಗ್ಗ, ಧಾರವಾಡ, ಬೆಳಗಾವಿ, ಮಂಗಳೂರು ಮೊದಲಾದ ಜೈಲುಗಳಿಗೆ ಸ್ಥಳಾಂತರಿಸಲಾಗಿತ್ತು ಎಂದು ತಿಳಿದುಬಂದಿದೆ..

2012ರಲ್ಲಿ ಹಿರಿಯಡಕ ಸಬ್‌ಜೈಲಿನಲ್ಲಿ ವಿನೋದ್ ಶೆಟ್ಟಿಗಾರ್ ಹತ್ಯೆಯ ಆರೋಪಿ ಸಂತೋಷ್ ಪೂಜಾರಿಯ ಮೇಲೆ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಮೇ 31ಕ್ಕೆ ಉಡುಪಿ ಕೋರ್ಟ್‌ನಲ್ಲಿ ವಿಚಾರಣೆ ಇತ್ತು. ಹೀಗಾಗಿ ಕಳೆದೊಂದು ತಿಂಗಳಿನಿಂದ ಮಂಗಳೂರು ಜೈಲಿನಲ್ಲಿದ್ದ ಟೋನಿಯನ್ನು ಮೇ 19ರಂದು ಹಿರಿಯಡ್ಕ ಸಬ್‌ಜೈಲಿಗೆ ಸ್ಥಳಾಂತರಿಸಲಾಗಿತ್ತು. ಅದಕ್ಕೂ ಮೊದಲು ಆತ ಬೆಳಗಾವಿ ಜೈಲಿನಲ್ಲಿದ್ದ. ತಾನಿದ್ದ ಜೈಲುಗಳಲ್ಲೆಲ್ಲಾ ಸಹಕೈದಿಗಳೊಂದಿಗೆ ಗಲಾಟೆ ನಡೆಸುವುದು ಆತನ ಖಯಾಲಿಯಾಗಿದೆ. ಇಲ್ಲೂ ಕ್ಷುಲ್ಲಕ ಕಾರಣಕ್ಕಾಗಿ ಜಗಳ ತೆಗೆದ ಈತನನ್ನು ಸಂಬಾಳಿಸುವುದು ದೊಡ್ಡ ತಲೆನೋವಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News