ಅಂಬ್ಲಮೊಗರು ಗ್ರಾ.ಪಂ. ಮುಂದೆ ನಿವೇಶನ ರಹಿತರಿಂದ ಧರಣಿ

Update: 2017-05-22 16:36 GMT

ಉಳ್ಳಾಲ, ಮೇ 22: ಕರ್ನಾಟಕ ಪ್ರಾಂತ ರೈತ ಸಂಘದ ಸ್ಥಳೀಯ ಗ್ರಾಮ ಸಮಿತಿಯಿಂದ ನಿವೇಶನ ರಹಿತರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸೋಮವಾರ ಅಂಬ್ಲಮೊಗರು ಗ್ರಾಮ ಪಂಚಾಯತ್ ಎದುರುಗಡೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಅಂಬ್ಲಮೊಗರು ಗ್ರಾಮದ ಮನೆ ನಿವೇಶನ ಇಲ್ಲದವರಿಗೆ ನಿವೇಶನ ಕೊಡಬೇಕು. ಸರಕಾರಿ ಸ್ಥಳದಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕು ಪತ್ರ ನೀಡಬೇಕು. ಗ್ರಾಮದ ಎಲ್ಲಾ ಪ್ರದೇಶದವರಿಗೂ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಅಂಬ್ಲಮೊಗರು ಗ್ರಾಮದ ಶಾಲೆ ಪಡ್ಪುವಿನಿಂದ ಕೊಲಂಜಿಬೆಟ್ಟುವರೆಗೆ ರಸ್ತೆ ನಿರ್ಮಾಣ ಮಾಡಬೇಕು. ಅಂಬ್ಲಮೊಗರು ಗ್ರಾಮದ ಬಾರೆದಡ್ಕದಿಂದ ಕೋಜೆಹಿತ್ತಲು ತನಕ ರಸ್ತೆ ನಿರ್ಮಾಣ ಮಾಡಬೇಕು. ಎನ್.ಆರ್.ಜಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಯಾಗಬೇಕೆಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಧರಣಿ ನಡೆಸಿದರು.

 ಧರಣಿಯನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಮುಖಂಡ ಯಾದವ ಶೆಟ್ಟಿ ಅವರು, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯದಲ್ಲಿ ಮಾತ್ರ ಸಮರ್ಪಕ ಭೂಸುಧಾರಣೆ ನೀತಿಯು ಜಾರಿಯಲ್ಲಿದೆ. ಕೇರಳದಲ್ಲಿ ನಿವೇಶನ ರಹಿತರಿಗೆ 12 ಸೆಂಟ್ಸ್ ಜಾಗ ಮತ್ತು ಮನೆಕಟ್ಟಲು ಮೂರು ಲಕ್ಷ ರೂಪಾಯಿ ಅನುದಾನ ನೀಡಲಾಗುತ್ತದೆ. ಆದರೆ ಕರ್ನಾಟಕದಲ್ಲಿ ಮಾತ್ರ ಈ ನೀತಿ ಯಾಕೆ ಅನ್ವಯವಾಗಿಲ್ಲ ಎಂದವರು ಪ್ರಶ್ನಿಸಿದರು.

ನಿವೇಶನ ರಹಿತರ ಪರವಾಗಿ ಈ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟಿಸಿದಾಗ ಪಂಚಾಯತ್ ಆಡಳಿತವು ನಿವೇಶನ ರಹಿತರ ಪಟ್ಟಿಯನ್ನು ಸರಕಾರಕ್ಕೆ ಹಸ್ತಾಂತರಿಸದೇ ಇರುವ ಕಟು ಸತ್ಯ ಎಲ್ಲರಿಗೂ ತಿಳಿದಿತ್ತು. ಗ್ರಾಮದಲ್ಲಿ ಕಾದಿರಿಸಿದ ಸರಕಾರಿ ಜಾಗವನ್ನು ಸೂಕ್ತ ಮಾನದಂಡದಡಿ ಅರ್ಹ ಬಡವರಿಗೆ ಹಂಚಬೇಕೆಂದು ಪಿಡಿಒ ಕೃಷ್ಣಕುಮಾರ್ ಅವರಲ್ಲಿ ಒತ್ತಾಯಿಸಿದರು. ಮುಖಂಡರಾದ ಜಯಂತ್ ನಾಯ್ಕಾ, ಇಬ್ರಾಹೀಂ ಮದಕ, ಜಯಂತ್ ಅಂಬ್ಲಮೊಗರು, ಉಮೇಶ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News