ತಿವಾರಿ ಸಾವು: ಸಿಬಿಐ ತನಿಖೆಗೆ ಉ.ಪ್ರ. ಶಿಫಾರಸು

Update: 2017-05-22 16:50 GMT

ಲಕ್ನೋ,ಮೇ 22: ಉತ್ತರ ಪ್ರದೇಶ ಸರಕಾರವು ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಸಾವಿನ ಕುರಿತು ಸಿಬಿಐ ತನಿಖೆಗೆ ಸೋಮವಾರ ಶಿಫಾರಸು ಮಾಡಿದೆ. ಇದಕ್ಕೂ ಮುನ್ನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಭೇಟಿಯಾಗಿದ್ದ ತಿವಾರಿ ಕುಟುಂಬ ಸದಸ್ಯರು ರಾಜ್ಯ ಪೊಲೀಸರಿಂದ ಪ್ರಕರಣದ ತನಿಖೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು.

ಐದು ದಿನಗಳ ಹಿಂದೆ ಲಕ್ನೋದಲ್ಲಿ ರಸ್ತೆಬದಿಯಲ್ಲಿ ತಿವಾರಿಯವರ ಶವವು ಪತ್ತೆಯಾದ ಬಳಿಕ ಅವರ ಕೊಲೆಯಾಗಿದೆ ಎಂದು ಕುಟುಂಬವು ಆರೋಪಿಸಿತ್ತು. ಬೆಂಗಳೂರಿನಲ್ಲಿ ತಾನು ಆಯುಕ್ತನಾಗಿದ್ದ ಕರ್ನಾಟಕ ರಾಜ್ಯ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಲ್ಲಿನ ಹಗರಣವೊಂದನ್ನು ತಿವಾರಿಯವರು ಬಹಿರಂಗ ಗೊಳಿಸಲಿದ್ದರು ಮತ್ತು ಇದೇ ಕಾರಣಕ್ಕಾಗಿ ಭ್ರಷ್ಟ ಅಧಿಕಾರಿಗಳ ಸೂಚನೆಯಂತೆ ಅವರನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದರು.

ತಿವಾರಿಯವರ ಸೋದರ ಮಯಾಂಕ್ ತಿವಾರಿಯವರ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಹಝ್ರತ್‌ಗಂಜ್ ಸಿಪಿಐ ಅವಿನಾಶ ಕುಮಾರ್ ಮಿಶ್ರಾ ಸೋಮವಾರ ತಿಳಿಸಿದರು.

ಸಿಬಿಐ ತನಿಖೆಗೆ ಒತ್ತಾಯಿಸಲು ತನ್ನ ತಾಯಿ ಸುಶೀಲಾ ದೇವಿ ಅವರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದ ಮಯಾಂಕ್ ತಿವಾರಿ ಅವರು, ಅಪರಾಧದ ಸ್ಥಳವನ್ನು ತೊಳೆಯಲಾಗಿತ್ತು ಮತ್ತು ಸಹೋದರನ ಮೊಬೈಲ್ ಫೋನ್ ಲಾಕ್ ಆಗಿರದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News