ಶಿಕ್ಷಣ ಇಲಾಖೆಯ ಆದೇಶದ ವಿರುದ್ಧ ಪ್ರತಿಭಟನೆ

Update: 2017-05-22 17:46 GMT

ಬಂಟ್ವಾಳ, ಮೇ 22: ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ರದ್ದು ಹಾಗೂ ಒಂದರಿಂದ ಐದನೆ ತರಗತಿವರೆಗೆ ಆಂಗ್ಲ ಭಾಷೆ ಕಲಿಕೆ ನಿಷೇಧಿಸುವಂತೆ ಶಿಕ್ಷಣ ಇಲಾಖೆಯ ಆದೇಶದ ವಿರುದ್ಧ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಸೋಮವರ ಪ್ರತಿಭಟನೆ ನಡೆಯಿತು.

ಪ್ರತಿಭಟನೆಗೆ ಶಿಕ್ಷಣ ಇಲಾಖೆಯ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಲಗುವ ಮೂಲಕ ರಸ್ತೆ ತಡೆ ಮಾಡಿದದರು. ಸುಮಾರು ಒಂದುವರೆ ತಾಸುಗಳ ಕಾಲ ನಿರಂತರವಾಗಿ ರಾ. ಹೆದ್ದಾರಿ ಬಳಿ ಕುಳಿತು ಶಾಂತವಾಗಿ ಪ್ರತಿಭಟನೆ ನಡೆಸಿದರೂ ಶಿಕ್ಷಣ ಇಲಾಖೆಯ ಯಾವುದೇ ಒಬ್ಬ ಅಧಿಕಾರಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸದಿರುವುದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಸೇರಿಂದತೆ ನೂರಾರು ಮಂದಿ ಪ್ರತಿಭಟನಕಾರರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ಇದರಿಂದಾಗಿ ಕೆಲ ಹೊತ್ತುಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತು. ತಕ್ಷಣ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿ ಶಿಕ್ಷಣಾಧಿಕಾರಿ ನೀಡಿರುವ ಆದೇಶವನ್ನು ಹಿಂಪಡೆಯಲು ಒಂದು ವಾರಗಳ ಗಡುವು ನೀಡಿ ತಪ್ಪಿದ್ದಲ್ಲಿ ಮತ್ತೆ ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಮಾತನಾಡಿ ಶಿಕ್ಷಣ ಇಲಾಖೆ ಎಲ್‌ಕೆಜಿ, ಯುಕೆಜಿ ನಿಷೇಧಿಸಿರುವುದು ದುರಾದೃಷ್ಟಕರ. ಸರಕಾರ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಬೆನ್ನುತಟ್ಟುತ್ತಿದೆಯೇ? ಎನ್ನುವ ಬಲವಾದ ಸಂಶಯ ಕಾಡುತ್ತಿದೆ. ಶಿಕ್ಷಣ ಸಚಿವರು ಸರಕಾರಿ ಶಾಲೆಗಳಲ್ಲಿ ಆಂಗ್ಲ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡುಲಾಗುತ್ತದೆ ಎಂದು ಹೇಳುತ್ತಾರೆ. ಇಲ್ಲಿನ ಶಿಕ್ಷಣಾಧಿಕಾರಿ ಎಲ್‌ಕೆಜಿ, ಯುಕೆಜಿ ರದ್ದು ಮಾಡಲು ಹೇಳುತ್ತಾರೆ. ಸಚಿವರ ಮಾತಿಗೂ ಈ ಆದೇಶಕ್ಕೂ ಏನು ಸಂಬಂಧ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದರು.

ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಮಾತನಾಡಿ, ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಲು ಶಿಕ್ಷಣ ಇಲಾಖೆಯೇ ಅನುಮತಿ ನೀಡಿ ಇಂದು ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದೆ. ಸರಕಾರಿ ಶಾಲೆಯನ್ನು ಉಳಿಸಲು ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್‌ನ ಸದಸ್ಯರು ತಮ್ಮ ಎಲ್ಲಾ ಕೆಲಸಗಳನ್ನು ಬಿಟ್ಟು ರಾತ್ರಿ ಹಗಲೆನ್ನದೆ ದುಡಿದಿದ್ದಾರೆ. ಆದರೆ ಈ ಹಂತದಲ್ಲಿ ರಾಜಕೀಯ ಒತ್ತಡಕ್ಕೆ ಮಣಿದು ಇಂತಹ ಆದೇಶ ನೀಡುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.

ಜಿಪಂ ಸದಸ್ಯ ತುಂಗಪ್ಪ ಬಂಗೇರ, ಪ್ರಗತಿಪರ ಕೃಷಿಕ ರಾಜೇಶ್‌ನಾಕ್ ಉಳಿಪಾಡಿಗುತ್ತು, ಪುರಸಭಾ ಸದಸ್ಯ ದೇವದಾಸ ಶೆಟ್ಟಿ, ಹರಿಕೃಷ್ಣ ಬಂಟ್ವಾಳ್, ಜಿತೇಂದ್ರ ಕೊಟ್ಟಾರಿ, ಜೆಸಿಐ ಅಧ್ಯಕ್ಷ ಡಾ. ಬಾಲಕೃಷ್ಣ ಅಗ್ರಬೈಲು, ತಾಪಂ ಸದಸ್ಯ ಗಣೇಶ್ ಸುವರ್ಣ, ವಿಶ್ವ ಹಿಂದೂ ಪರಿಷತ್ ತಾಲೂಕು ಘಟಕ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ನುಳಿಯಾಲುಗುತ್ತು, ಪಂಜಿಕಲ್ಲು ಗ್ರಾಪಂ ಅಧ್ಯಕ್ಷೆ ಸುಮಿತ್ರ ಯೋಗೀಶ್, ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಗೌಡ, ಸದಸ್ಯ ಪೂವಪ್ಪ ಮೆಂಡನ್, ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ತಾ.ಪಂ.ಮಾಜಿ ಸದಸ್ಯ ಸೋಮಪ್ಪ ಕೋಟ್ಯಾನ್, ದಾಮೋದರ ನೆತ್ತರಕೆರೆ, ಜಿ.ಆನಂದ, ಕೇಶವ ಡಿ, ಮಚ್ಚೇಂದ್ರ ಸಾಲ್ಯಾನ್, ಪುರುಷೋತ್ತಮ ಸಾಲ್ಯಾನ್ ಶಂಭೂರು, ಶರತ್‌ಕುಮಾರ್ ಮತ್ತಿತರರು ಹಾಜರಿದ್ದರು.

ಬಂಟ್ವಾಳ ನಗರ ಪೊಲೀಸ್ ಠಾಣೆ ಸಿಬ್ಬಂದಿ ಬಂದೋಬಸ್ತ್ ಒದಗಿಸಿದ್ದರು. ತಹಶೀಲ್ದಾರ್ ಪುರಂದರ ಹೆಗ್ಡೆ ಮನವಿ ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿಕೊಡುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News