ಅರ್ಹತೆಯಿರುವ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು: ಡಾ. ನಝೀರ್

Update: 2017-05-22 18:05 GMT

ಪುತ್ತೂರು, ಮೇ 22 ರಕ್ತದಾನವು ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿದ್ದು ಇನ್ನೊಬ್ಬರ ಜೀವ ಉಳಿಸುವ ಶ್ರೇಷ್ಠ ಕಾರ್ಯವಾಗಿದೆ ಎಂದು ಮಧುಮೇಹ ತಜ್ಞ ಡಾ. ನಝೀರ್ ಅಹ್ಮದ್ ಹೇಳಿದರು.

ಅವರು ಪಿಎಫ್‌ಐ ಕುಂಬ್ರ ಡಿವಿಜನ್ ವತಿಯಿಂದ ಮಂಗಳೂರು ಕೆಎಂಸಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಕುಂಬ್ರ ರೈತ ಸಭಾಭವನ ದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ ಮಾತನಾಡಿ ರಕ್ತದಾನ ಮಾಡುವುದರಿಂದ ಯಾವುದೇ ತೊಂದರೆಯಿಲ್ಲ, ಅರ್ಹತೆಯಿರುವ ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು.

ಬ್ಲಡ್ ಬ್ಯಾಂಕ್ ಆಫೀಸರ್ ಡಾ. ಸೊನಾಲಿ ಮಾತನಾಡಿ ರಕ್ತದಾನವು ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರದೆ ಉತ್ತಮ ಆರೋಗ್ಯ ಪಡೆಯಲು ಸಹಕಾರಿಯಾಗುತ್ತದೆ, ಪುರುಷರು ಮೂರು ತಿಂಗಳಿಗೊಮ್ಮೆ ಹಾಗೂ ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದು ಅವರು ಹೇಳಿದರು.

ಒಳಮೊಗ್ರು ಗ್ರಾ.ಪಂ ಸದಸ್ಯ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಮಾತನಾಡಿ ರಕ್ತದಾನ ಜೀವದಾನವಾಗಿದ್ದು ಸೇವಾ ಮನೋಭಾವವಿದ್ದವರಿಗೆ ಮಾತ್ರ ರಕ್ತದಾನ ಮಾಡಲು ಸಾಧ್ಯ. ಸಂಘಟನೆಗಳ ಮೂಲಕ ರಕ್ತದಾನ ಮಾಡುವುದು ಅತ್ಯುತ್ತಮ ಕಾರ್ಯವಾಗಿದೆ, ರಕ್ತಕ್ಕೆ ಜಾತಿ, ಧರ್ಮದ ಅಂತರವಿಲ್ಲ ಎಂದು ತಿಳಿಸಿದರು.

ಆಲ್‌ಇಂಡಿಯಾ ಇಮಾಮ್ ಕೌನ್ಸಿಲ್ ತಾಲೂಕು ಸಮಿತಿಯ ಸದಸ್ಯ ಮುಸ್ತಫಾ ಕಾಮಿಲ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಿಎಫ್‌ಐ ಪುತ್ತೂರು ಜಿಲ್ಲಾಧ್ಯಕ್ಷ ಅಬೂಬಕ್ಕರ್ ರಿಝ್ವಾನ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ,ಕುಂಬ್ರ ಸಿ.ಎ ಬ್ಯಾಂಕ್ ಮೆನೇಜರ್ ರಮೇಶ್ ಮಾರ್ಲ ಎಂ, ಪಿಎಫ್‌ಐ ಕುಂಬ್ರ ಡಿವಿಜನ್ ಅಧ್ಯಕ್ಷ ಕೆ.ಎಂ ಶರೀಫ್ ಕಟ್ಟತ್ತಾರು, ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಜಾಬಿರ್ ಅರಿಯಡ್ಕ, ಸಿಎಫ್‌ಐ ರಾಜ್ಯ ಸಮಿತಿ ಸದಸ್ಯ ಇರ್ಶಾದ್ ಕಾವು ಉಪಸ್ಥಿತರಿದ್ದರು.

ಕೆ.ಎಂ ಶಾಕಿರ್ ಕಟ್ಟತ್ತಾರು ಸ್ವಾಗತಿಸಿದರು. ಸಿದ್ದಿಕ್ ಪರ್ಪುಂಜ ವಂದಿಸಿದರು. ಸಾದಿಕ್ ಜಾರತ್ತಾರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News