ಉಡುಪಿ: ತಾಳಮದ್ದಲೆ ಸಪ್ತಾಹ ಉದ್ಘಾಟನೆ

Update: 2017-05-22 18:22 GMT

ಉಡುಪಿ, ಮೇ 22: ಬಿಲ್ಲವರ ಸೇವಾ ಸಂಘ ಬನ್ನಂಜೆ ಇವರ ಸಹಯೋಗ ದೊಂದಿಗೆ ಉಡುಪಿಯ ಯಕ್ಷಗಾನ ಕಲಾರಂಗ ಆಯೋಜಿಸಿರುವ ತಾಳಮದ್ದಲೆ ಸಪ್ತಾಹ ಸೋಮವಾರ ಸಂಜೆ ಬನ್ನಂಜೆಯ ಶಿವಗಿರಿ ಸಭಾಗೃಹದಲ್ಲಿ ಉಡುಪಿ ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಬಿ.ಬಿ.ಪೂಜಾರಿ ಅವರಿಂದ ಉದ್ಘಾಟನೆಗೊಂಡಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಅವರು ಯಕ್ಷಗಾನ ಕಲಾರಂಗದ ಸಮಸ್ತ ಕಾರ್ಯಕ್ರಮಗಳಿಗೆ ಜಿಪಂ ವತಿಯಿಂದ ನೆರವು ನೀಡುವ ಭರವಸೆ ನೀಡಿದರು.

ಸಿಂಡಿಕೇಟ್ ಬ್ಯಾಂಕಿನ ಡಿಜಿಎಂ ಎಸ್.ಎಸ್.ಹೆಗ್ಡೆ ಹಾಗೂ ಹಂಗಾರಕಟ್ಟೆ ಐರೋಡಿ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ಎ.ರಾಜಶೇಖರ ಹೆಬ್ಬಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ ರಾವ್, ಉಪಾಧ್ಯಕ್ಷ ಎಸ್.ವಿ.ಭಟ್ ಉಪಸ್ಥಿತರಿದ್ದರು.

ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಂ.ಗಗಾಂಧರ ರಾವ್ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ.ನಾರಾಯಣ ಹೆಗಡೆ ವಂದಿಸಿದರು.

ಮೊದಲ ದಿನದ ಕಾರ್ಯಕ್ರಮದಲ್ಲಿ ಕುಬಣೂರು ಶ್ರೀಧರ ರಾವ್, ಪದ್ಯಾಣ ಶಂಕರನಾರಾಯಣ ಭಟ್ ಮುಂತಾದ ಕಲಾವಿದರ ಭಾಗವಹಿಸುವಿಕೆಯಲ್ಲಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಕಾಶಿಕ ಪ್ರತಿಜ್ಞೆ’ ತಾಳಮದ್ದಲೆ ನಡೆಯಿತು.

ಸಪ್ತಾಹದ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಮೇ 28ರಂದು ರವಿವಾರ ಸಂಜೆ 7ಕ್ಕೆ ಕರ್ಣಾಟಕ ಬ್ಯಾಂಕ್‌ನ ಜಿಎಂ ಮುರಳೀಧರಕೃಷ್ಣ ರಾವ್ ಅಧ್ಯಕ್ಷತೆಯಲ್ಲಿ ಜರಗಲಿದೆ. ಮಂಗಳೂರು ಶಾರದಾ ವಿದ್ಯಾಸಂಸ್ಥೆ ಅಧ್ಯಕ್ಷ ಪ್ರೊ.ಎಂ.ಬಿ ಪುರಾಣಿಕ್, ಹಿರಿಯ ಅರ್ಥಧಾರಿಗಳಾದ ಡಾ. ಡಿ ಸದಾಶಿವ ಭಟ್ಟ ಇವರಿಗೆ ಮಟ್ಟಿ ಮುರಲೀಧರ ರಾವ್ ಪ್ರಶಸ್ತಿ ಹಾಗೂ ಡಾ. ಪಿ.ಶಾಂತಾರಾಮ ಪ್ರು ಇವರಿಗೆ ಪೆರ್ಲ ಕೃಷ್ಣ ಭಟ್ ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಳಮದ್ದಲೆ ಸಪ್ತಾಹ ಮೇ 28ರವರೆಗೆ ಬಿಲ್ಲವರ ಬನ್ನಂಜೆ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಬಳಿ ಇರುವ ಶಿವಗಿರಿ ಸಬಾಗೃಹದಲ್ಲಿ ಜರಗಲಿದೆ. ‘ವಿಶ್ವಾಮಿತ್ರ’ ಪ್ರಧಾನ ಶೀರ್ಷಿಕೆಯಲ್ಲಿ ಪ್ರತಿದಿನ ಸಂಜೆ 4:30ರಿಂದ 7:30ರವರೆಗೆ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಅನುಕ್ರಮವಾಗಿ ಕೌಶಿಕ ಪ್ರತಿಜ್ಞೆ, ಪ್ರತಿಸ್ವರ್ಗ ನಿರ್ಮಾಣ, ವಿಶ್ವಾಮಿತ್ರ ಮೇನಕೆ, ವರುಣ ಯಾಗ, ಶಿವ ಸಾಕ್ಷಾತ್ಕಾರ, ಸತ್ಯಾನ್ವೇಷಣೆ ಹಾಗೂ ಸತ್ಯದರ್ಶನ ಪ್ರಸಂಗಗಳು ಪ್ರಸ್ತುತಗೊಳ್ಳಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News