ಮಂಗಳೂರು ವಿಮಾನ ದುರಂತಕ್ಕೆ 7 ವರ್ಷ

Update: 2017-05-22 18:26 GMT

ಮಂಗಳೂರು, ಮೇ 22: ಮಂಗಳೂರು ವಿಮಾನ ದುರಂತ ಸಂಭವಿಸಿ ಇಂದಿಗೆ ಏಳು ವರ್ಷಗಳು ಸಂದ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತದ ವತಿಯಿಂದ ನಗರದ ಕೂಳೂರು ತಣ್ಣೀರುಬಾವಿ ಬಳಿಯ ಉದ್ಯಾನವನದಲ್ಲಿ ದ.ಕ. ಜಿಲ್ಲಾಡಳಿತದ ವತಿಯಿಂದ ಶ್ರದ್ಧಾಂಜಲಿಯನ್ನು ಏರ್ಪಡಿಸಲಾಯಿತು. 

ಮೃತರ ಕೆಲ ಸಂಬಂಧಿಗಳ ಉಪಸ್ಥಿತಿಯಲ್ಲಿ ಪುಷ್ಪಾಂ ಜಲಿಯ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಮಂಗಳೂರು ವಿಮಾನ ದುರಂತ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಮರೆಯಲಾಗದ ಘಟನೆ ಯಾಗಿ ಅಚ್ಚೊತ್ತಿದೆ ಎಂದರು.

ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮನಪಾ ಮೇಯರ್ ಕವಿತಾ ಸನಿಲ್, ಮೂಡಾ ಅಧ್ಯಕ್ಷ ಸುರೇಶ್ ಬಳ್ಳಾಲ್, ಸ್ಥಳೀಯ ಕಾರ್ಪೊರೇಟರ್ ರಘುವೀರ್, ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್. ರವಿ, ಅಪರ ಜಿಲ್ಲಾಧಿಕಾರಿ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ.ವಿ. ರಾವ್ ಮೊದ ಲಾದವರು ಉಪಸ್ಥಿತರಿದ್ದರು.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಆರು ಸಿಬ್ಬಂದಿಯ ಜತೆ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ 166 ಮಂದಿ ಪ್ರಯಾಣಿಕರಲ್ಲಿ 158 ಮಂದಿ ಮೃತಪಟ್ಟಿದ್ದರು. ದುರ್ಘಟನೆಯಲ್ಲಿ ಮೃತದೇಹಗಳು ಸುಟ್ಟು ಕರಕಲಾಗಿದ್ದರಿಂದ 10 ಮಂದಿ ಮೃತರ ಗುರುತು ಪತ್ತೆ ಅಸಾಧ್ಯವಾಗಿತ್ತು. ಆದ್ದರಿಂದ ಆ ಮೃತದೇಹಗಳನ್ನು ಕೂಳೂರು- ತಣ್ಣೀರುಬಾವಿ ಬಳಿ ಸರ್ವಧರ್ಮಗಳ ಶಾಸ್ತ್ರ ಪ್ರಕಾರ ಅಂತ್ಯ ಸಂಸ್ಕಾರ ನಡೆಸಲಾಗಿತ್ತು. ಇದೀಗ ಕಳೆದ ಎರಡು ವರ್ಷಗಳಿಂದ ದ.ಕ. ಜಿಲ್ಲಾಡಳಿತದ ವತಿಯಿಂದ ಈ ಉದ್ಯಾನವನದಲ್ಲಿ ದುರಂತದ ಮೃತರ ನೆನಪಿನಲ್ಲಿ ಶ್ರದ್ಧಾಂಜಲಿಯನ್ನು ಏರ್ಪಡಿಸುತ್ತಿದೆ.

  • ‘ಕಮರಿದ ಬದುಕಿಗೆ ಜೀವ ತುಂಬಿದ ಶಿಕ್ಷಕ ವೃತ್ತಿ’

 ‘‘ವಿಮಾನ ದುರಂತದ ಕರಾಳ ನೋವನ್ನು ನಾನೆಂದೂ ಮರೆಯಲು ಸಾಧ್ಯವಿಲ್ಲ. ಈ ನಡುವೆ ಶಿಕ್ಷಕಿ ವೃತ್ತಿ ಸಮಾಜವನ್ನು ಎದುರಿಸಲು ನನಗೆ ಸಹಕಾರಿಯಾಯಿತು. ಮಕ್ಕಳು ಹಾಗೂ ಶಿಕ್ಷಕ ವೃತ್ತಿ ಮನದಲ್ಲಿ ಹೆಪ್ಪುಗಟ್ಟಿರುವ ನನ್ನ ಪತಿಯ ಅಗಲಿಕೆಯ ನೋವನ್ನು ಮರೆಯಲೆತ್ನಿಸಲು ನನಗೆ ಸಹಕಾರ ನೀಡಿದೆ.’’

ಇದು ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಕೆಂಜಾರು ಬಳಿ 2010ರ ಮೇ 22ರಂದು ಮುಂಜಾನೆ ಸಂಭವಿಸಿದ ವಿಮಾನ ದುರಂತದಲ್ಲಿ ಪ್ರಾಣವನ್ನು ಕಳೆದುಕೊಂಡ ಮೆಲ್ವಿನ್ ಕಿರಣ್ ಮಿನೇಜಸ್‌ರ ಪತ್ನಿ ಹೆಲೆನ್ ರೀಟಾ ಮಿನೇಜಸ್‌ರವರ ಮಾತು. ವಿಮಾನ ದುರಂತದ ಮೃತರ ಸ್ಮರಣಾರ್ಥ ಕೂಳೂರು ತಣ್ಣೀರುಬಾವಿ ಬಳಿಯ ಉದ್ಯಾನವನ ದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ತಮ್ಮ ಪುತ್ರಿಯೊಂದಿಗೆ ಪಾಲ್ಗೊಂಡಿದ್ದರು. ವಿಮಾನ ದುರಂತಕ್ಕೆ ಮೊದಲು ಮೆಲ್ವಿನ್‌ರವರು ದುಬೈನ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ 12 ವರ್ಷಗಳ ಕಾಲ ವೃತ್ತಿಯಲ್ಲಿದ್ದರು. ಐದು ವರ್ಷ ಕಾಲ ಹೆಲೆನ್ ತಮ್ಮ ಮಕ್ಕಳೊಂದಿಗೆ ಪತಿಯ ಜತೆಗೆ ದುಬೈನಲ್ಲಿ ನೆಲೆಸಿದ್ದರು. ದುರ್ಘಟನೆಗೆ ಒಂದು ವಾರದ ಮೊದಲಷ್ಟೆ ಹೆಲೆನ್ ತಮ್ಮ ತಂದೆ- ತಾಯಿಯ ವೈವಾಹಿಕ ಜೀವನದ 50 ವರ್ಷಾಚರಣೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮಕ್ಕಳೊಂದಿಗೆ ಆಗಮಿಸಿದ್ದರು. ಒಂದು ವಾರದ ಬಳಿಕ ಅಂದರೆ ದುರ್ಘಟನೆ ನಡೆದ ಒಂದು ದಿನ ಮೊದಲು ಮೇ 21ರ ಶುಕ್ರವಾರದಂದು ಹೆಲೆನ್ ಮಕ್ಕಳೊಂದಿಗೆ ವಾಪಾಸು ದುಬೈಗೆ ತೆರಳುವವರಿದ್ದರು. ಆದರೆ, ಈ ನಡುವೆ ಅವರ ಪುತ್ರ ಕ್ಲಿಯಾನ್ ಕೀತ್ ಮಿನೇಜಸ್ (ದುರಂತ ಸಂದರ್ಭ ಆತನಿಗೆ ನಾಲ್ಕೂವರೆ ವರ್ಷ. ಮಗಳು ಮೇಘನ್ ರಿಯಾ ಮಿನೇಜಸ್‌ಗೆ 1 ವರ್ಷ 10 ತಿಂಗಳು) ಅಸೌಖ್ಯಕ್ಕೀಡಾಗಿದ್ದ. ಈ ಹಿನ್ನೆಲೆಯಲ್ಲಿ ಹೆಲೆನ್ ತಮ್ಮ ದುಬೈ ಪ್ರಯಾಣವನ್ನು ಮುಂದೂಡಿದ್ದರು. ಈ ನಡುವೆ ದುರಂತದ ಎರಡು ದಿನಕ್ಕೆ ಮುಂಚಿತವಾಗಿ ಮೆಲ್ವಿನ್ ಅವರೂ ಮಂಗಳೂರಿಗೆ ಬರಲು ಪ್ರಯತ್ನಿಸಿದರೂ ಟಿಕೆಟ್ ಸಿಕ್ಕಿರಲಿಲ್ಲ. ಆದ್ದರಿಂದ ದುರ್ಘಟನೆ ನಡೆದ ದಿನ ಅವರು ದುರಂತಕ್ಕೀಡಾದ ವಿಮಾನವನ್ನೇರಿದ್ದರು.
‘‘ಮಕ್ಕಳಿಗೆ ಆಸರೆಯಾಗಿ ನನಗೆ ನಾನು ಧೈರ್ಯ ತುಂಬಲು ಆರಂಭದಲ್ಲಿ ದೇರೆಬೈಲ್‌ನ ಸೈಂಟ್ ಆ್ಯನ್ಸ್ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿದೆ. ಕಂಪ್ಯೂಟರ್ ಸಾಯನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದ ನಾನು ಮತ್ತೆ ಪುಣೆ ವಿಶ್ವವಿದ್ಯಾನಿಲಯದಿಂದ ಬಿಎಡ್ ಕೋರ್ಸ್ ಪೂರೈಸಿ ಇದೀಗ ಬೊಂದೇಲ್‌ನ ಸೈಂಟ್ ಲಾರೆನ್ಸ್ ಹೈಸ್ಕೂಲ್‌ನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ’’ ಎಂದು ಹೆಲೆನ್ ‘ವಾರ್ತಾಭಾರತಿ’ಯೊಂದಿಗೆ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News