ಮಲಯಾಳಂ ಭಾಷೆ ಕಡ್ಡಾಯಕ್ಕೆ ವಿರೋಧ: ಕಾವೇರಿದ ಗಡಿನಾಡ ಕನ್ನಡಿಗರ ದಿಗ್ಬಂಧನ ಚಳವಳಿ

Update: 2017-05-23 07:09 GMT

ಕಾಸರಗೋಡು, ಮೇ 23: ಮಲಯಾಳಂ ಭಾಷೆ ಕಡ್ಡಾಯ ಆದೇಶವನ್ನು ಪ್ರತಿಭಟಿಸಿ ಕನ್ನಡಿಗರ ಒಕ್ಕೂಟ ಹಮ್ಮಿಕೊಂಡಿರುವ ದಿಗ್ಬಂಧನ ಚಳವಳಿ ಆರಂಭವಾಗಿದ್ದು, ಸದಾ ಸಿಬ್ಬಂದಿ, ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಚಟುವಟಿಕೆ ಸ್ತಬ್ದಗೊಂಡಿದೆ. ಬೆಳಗ್ಗೆ 5 ಗಂಟೆಯಿಂದಲೇ ಪ್ರವೇಶ ದ್ವಾರದಲ್ಲಿ ಪ್ರತಿಭಟನಕಾರರು ಜಮಾಯಿಸಿದ್ದಾರೆ.

ಪೊಲೀಸರು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಕಾಸರಗೋಡಿನ 30ಕ್ಕೂ ಅಧಿಕ ಕನ್ನಡಪರ ಸಂಘಟನೆಗಳು, ರಾಜಕೀಯ, ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳು, ಸಂಘ ಸಂಸ್ಥೆಗಳು, ಕಲಾವಿದರು, ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಕರ್ನಾಟಕದ  ಹಲವು ಸಂಘಟನೆಗಳು ಪಾಲ್ಗೊಂಡಿವೆ.

ಮಲಯಾಳಂ ಭಾಷೆ ಕಡ್ಡಾಯ ಮಸೂದೆಯಿಂದ  ಭಾಷಾ ಅಲ್ಪಸಂಖ್ಯಾತ ಕಾಸರಗೋಡು ಜಿಲ್ಲೆಗೆ ವಿನಾಯಿತಿ ನೀಡುವಂತೆ ಹೋರಾಟ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಪ್ರವೇಶದ ಎಲ್ಲಾ ಬಾಗಿಲುಗಳಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ಪ್ರತಿಭಟನೆ ನಡೆಸಲು ಕಾರ್ಯಕರ್ತರು ಮುಂದಾಗಿದ್ದು, ಇದರಿಂದ ಜಿಲ್ಲಾಧಿಕಾರಿ ಕಚೇರಿ ಸಮುಚ್ಚಯದಲ್ಲಿರುವ ಸುಮಾರು 35ರಷ್ಟು ಸರಕಾರಿ ಕಚೇರಿಗಳ ಕೆಲಸ ಸ್ಥಗಿತಗೊಳ್ಳುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News