ಮಂಗಳೂರು ಮೇಯರ್‌ರಿಂದ ಪ್ರಥಮ "ಫೋನ್ ಇನ್" ಕಾರ್ಯಕ್ರಮ

Update: 2017-05-23 10:22 GMT

ಮಂಗಳೂರು, ಮೇ 23: ಮಹಾನಗರ ಪಾಲಿಕೆಯ ಮೇಯರ್‌ ರವರಿಂದ ಇಂದು ಆಯೋಜಿಸಲಾದ ಪ್ರಥಮ ಫೋನ್ ಇನ್ ಕಾರ್ಯಕ್ರಮದ ಒಂದು ಗಂಟೆಯ ಅವಧಿಯಲ್ಲೇ 50ಕ್ಕೂ ಅಧಿಕ ಸಾರ್ವಜನಿಕರು ಕರೆಗಳ ಮೂಲಕ ಸಮಸ್ಯೆಗಳನ್ನು ಹೇಳಿಕೊಂಡರು. ಬಹುತೇಕವಾಗಿ ಒಳಚರಂಡಿ ಅವ್ಯವಸ್ಥೆ, ಅತಿಕ್ರಮಣ, ರಸ್ತೆ ಸಮಸ್ಯೆಗಳ ಕುರಿತಂತೆ ಸಾರ್ವಜನಿಕರು ದೂರು ನೀಡಿದ್ದು, ಈ ಸಮಸ್ಯೆಗಳನ್ನು ಒಂದು ವಾರದೊಳಗೆ ಇತ್ಯರ್ಥಗೊಳಿಸುವಂತೆ ಮೇಯರ್ ಕವಿತಾ ಸನಿಲ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇದೇ ವೇಳೆ ಹೊಸ ರಸ್ತೆ ನಿರ್ಮಾಣ ಸೇರಿದಂತೆ ದೊಡ್ಡ ಕಾಮಗಾರಿಗಳಿಗೆ ಅಂದಾಜು ಪಟ್ಟಿ ತಯಾರಿಸಿ ಮಳೆಗಾಲದ ನಂತರ ಕಾಮಗಾರಿ ನಡೆಸುವಂತೆಯೂ ಅವರು ಈ ಸಂದರ್ಭ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತ್ಯಾಜ್ಯ ನೀರು ಸಂಸ್ಕರಣೆ ಬೇಡ!
ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಹಿನ್ನೆಲೆಯಲ್ಲಿ ಕೈಗಾರಿಗಳ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ ಸಾರ್ವಜನಿಕರಿಗೆ ಕುಡಿಯಲು ಪೂರೈಕೆ ಮಾಡಲಾಗುತ್ತಿದೆ ಎಂಬ ಸುದ್ದಿ ಇದೆ. ಆದರೆ ಆ ರೀತಿ ಮಾಡುವುದು ಬೇಡ. ಈಗ ಕುಡಿಯಲು ಬಳಸುವುದಿಲ್ಲ ಎಂದು ಹೇಳಿದರೂ ಮುಂದೆ ಅದನ್ನು ಉಪಯೋಗಿಸುವ ಸಾಧ್ಯತೆ ಇದೆ. ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ಸುನೀತಾ ಉರ್ವಾಸ್ಟೋರ್ ಫೋನ್ ಮೂಲಕ ಆತಂಕ ವ್ಯಕ್ತಪಡಿಸಿರು.

ಮೇಯರ್ ಕವಿತಾ ಸನಿಲ್ ಸ್ಪಷ್ಟೀಕರಿಸಿ, ಕೈಗಾರಿಕೆಗಳ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡುವುದು ಅಗತ್ಯವಾಗಿದೆ. ಆದರೆ ಅದನ್ನು ಕುಡಿಯಲು ಬಳಸುವುದಿಲ್ಲ. ಅದನ್ನು ಕೈಗಾರಿಕೆಗಳ ಮರು ಬಳಕೆಗೆ ಮಾತ್ರ ಉಪಯೋಗಿಸಲಾಗುವುದು ಎಂದರು.

ಒಳಚರಂಡಿ ಅತಿಕ್ರಮಣ ತೆರವಿಗೆ ಸೂಚನೆ
ಪಿಲಿಕುಳದ ಆರ್‌ಟಿಒ ಪರೀಕ್ಷಾ ಕೇಂದ್ರದ ಸಮೀಪದಲ್ಲಿ ಒಳಚರಂಡಿ ಮೇಲೆ ಮನೆಯೊಂದನ್ನು ಕಟ್ಟಿ ಅತಿಕ್ರಮಣ ಮಾಡಲಾಗಿದೆ ಎಂದು ಮಹೇಶ್ ವಾಮಂಜೂರು ಎಂಬವರ ದೂರಿಗೆ ಪ್ರತಿಕ್ರಿಯಿಸಿದ ಮೇಯರ್, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಮನವಿ
ಶರವು ದೇವಸ್ಥಾನದ ಬಳಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಅಲ್ಲಿ ಸಿಗ್ನಲ್ ವ್ಯವಸ್ಥೆ ಮಾಡಬೇಕು ಎಂದು ವಸಂತ್ ಕೊಟ್ಟಾರ ಎಂಬವರು ಮನವಿ ಮಾಡಿದಾಗ, ಟ್ರಾಫಿಕ್ ಸಮಸ್ಯೆಗಳ ಕುರಿತಂತೆ ಮೇ 26ರಂದು ಮನಪಾ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಮೇಯರ್ ತಿಳಿಸಿದರು.

ಪಿಲಿಕುಳದಲ್ಲಿ ಹಾವಿನ ಸಮಸ್ಯೆ!
ಪಿಲಿಕುಳದ ಭವಿಷ್ಯ ನಗರದಲ್ಲಿ ನಾಲ್ಕು ಸೈಟ್ ಖಾಲಿ ಇದೆ. ಅಲ್ಲಿ ಹುಲ್ಲು ಬೆಳೆದು ಸುತ್ತಮುತ್ತಲಿನ ಪ್ರದೇಶದ ಮನೆಗಳಿಗೆ ಹಾವುಗಳ ಸಮಸ್ಯೆಯಾಗುತ್ತಿದೆ ಎಂದು ವಿಲ್ಪ್ರೆಡ್ ಎಂಬವರು ದೂರಿದರು. 

ರಾಜಕಾಲುವೆ ಒತ್ತುವರಿ ತೆರವಿಗೆ ಕ್ರಮ
ನಗರದಲ್ಲಿ ಹಲವು ಕಡೆಗಳಲ್ಲಿ ರಾಜಕಾಲುವೆಗಳ ಒತ್ತುವರಿಯಾಗಿ ಕಟ್ಟಡ, ರಸ್ತೆಗಳನ್ನು ಮಾಡಲಾಗಿದೆ. ಇಂತಹ ಅತಿಕ್ರಮಣಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ ಸವರ್ಣ ಕರ್ನಾಟಕ ವೇದಿಕೆಯ ವೆಂಕಟೇಶ್ ಶೆಣೈ, ಸಂಸ್ಥೆ, ಅಂಗಡಿಗಳ ನಾಮಫಲಕಗಳನ್ನು ಕನ್ನಡವನ್ನು ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದರು.

ಮನಪಾ ನೌಕರರಿಗೆ ಸಮವಸ್ತ್ರಕ್ಕೆ ಆಗ್ರಹ
ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗೆ ಅಧಿಕಾರಿಗಳು, ನೌಕರರನ್ನು ಗುರುತಿಸುವುದು ಕಷ್ಟವಾಗುತ್ತಿದೆ. ಹಾಗಾಗಿ ನೌಕರರಿಗೆ ಸಮವಸ್ತ್ರ ವ್ಯವಸ್ಥೆ ಮಾಡಬೇಕು ಎಂದು ಉರ್ವಾಸ್ಟೋರ್‌ನ ಸುಪ್ರೀತ್ ಕುಮಾರ್ ಎಂಬವರು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಉಪ ಮೇಯರ್ ರಜನೀಶ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ರವೂಫ್, ಸಬಿತಾ ಮಿಸ್ಕಿತ್, ಆಯುಕ್ತ ಮುಹಮ್ಮದ್ ನಝೀರ್ ಹಾಗೂ ಇತರ ಹಿರಿಯ ಕಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಕ್ಷಣ ಸಮಸ್ಯೆ ಇತ್ಯರ್ಥಕ್ಕೆ ಅಧಿಕಾರಿಯನ್ನು ಕಳುಹಿಸಿದ ಮೇಯರ್!
ಕೆ. ನಾರಾಯಣ ಎಂಬವರು ಮೇಯರ್‌ಗೆ ದೂರು ನೀಡುತ್ತಾ, ಪಂಪ್‌ವೆಲ್‌ನ ಕರ್ಣಾಟಕ ಬ್ಯಾಂಕ್ ಸಮೀಪದ ವಸಂತ ನಗರದಲ್ಲಿ ಗೋಡೆಯೊಂದು ಕುಸಿದು ಬಿದ್ದಿದೆ. ಅದನ್ನು ಸರಿಪಡಿಸುಂತೆ ಸಂಬಂಧಪಟ್ಟ ಮನಪಾದ ಮಹಿಳಾ ಅಧಿಕಾರಿಗೆ ಕರೆ ಮಾಡಿದಾಗ, ಅವರು ನೀವು ಕರೆದಾಗಲೆಲ್ಲಾ ಬರಲು ಸಮಯವಿಲ್ಲ ಎಂದು ಉದ್ಧಟತನ ತೋರಿದ್ದಾರೆ. ಅದು ಸಾರ್ವಜನಿಕರ ಕೆಲಸ, ಗೌರವ ಕೊಟ್ಟು ಮಾತನಾಡಿ ಎಂದು ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಕ್ಷಣ ಸ್ಪಂದಿಸಿದ ಮೇಯರ್, ಆ ಸಂದರ್ಭ ಕೊಠಡಿಯಲ್ಲಿ ಹಾಜರಿದ್ದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಮೇಯರ್, ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ಸಮಸ್ಯೆ ಬಗೆಹರಿಸುವಂತೆ ಆದೇಶ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News