ಜಾರ್ಖಂಡ್ ಹತ್ಯಾಕಾಂಡ:ಇಬ್ಬರು ಪೊಲೀಸ್ ಠಾಣಾಧಿಕಾರಿಗಳ ಅಮಾನತು

Update: 2017-05-23 13:21 GMT

ರಾಂಚಿ,ಮೇ 23: ಮಕ್ಕಳ ಕಳ್ಳರು ಎಂಬ ಸುಳ್ಳು ಆರೋಪದಲ್ಲಿ ಉದ್ರಿಕ್ತ ಗುಂಪುಗ ಳಿಂದ ಏಳು ಜನರ ಹತ್ಯೆ ನಡೆದ ಸ್ಥಳಗಳ ವ್ಯಾಪ್ತಿ ಹೊಂದಿರುವ ಬಾಗ್ಬೇರಾ ಮತ್ತು ರಾಜನಗರ ಪೊಲೀಸ್ ಠಾಣಾಧಿಕಾರಿಗಳನ್ನು ಜಾರ್ಖಂಡ್ ಸರಕಾರವು ಅಮಾನತು ಗೊಳಿಸಿದೆ.

ಈ ಹತ್ಯೆಗಳ ಕುರಿತು ವಿಚಾರಣೆಯನ್ನು ನಡೆಸಲು ಕೋಲ್ಹನ್ ಆಯುಕ್ತರು ಮತ್ತು ಪ್ರಾದೇಶಿಕ ಡಿಐಜಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ರಾಜ್ಯ ಗೃಹ ಕಾರ್ಯದರ್ಶಿ ಎಸ್‌ಕೆಜಿ ರಾಹತೆ ತಿಳಿಸಿದರು.

ಅದು ಸುಳ್ಳು ವದಂತಿಗಳಿಗೆ ಗ್ರಾಮಸ್ಥರ ದಿಢೀರ್ ಪ್ರತಿಕ್ರಿಯೆಯಾಗಿತ್ತು ಎಂದ ಅವರು, ಈ ಸಂಬಂಧ ಈವರೆಗೆ 16 ಜನರನ್ನು ಬಂಧಿಸಲಾಗಿದೆ ಎಂದರು.

ಮೇ 18ರಂದು ಸರಾಯ್‌ಕೇಲಾ-ಖರ್ಸ್ವಾನ್ ಜಿಲ್ಲೆಯಲ್ಲಿ ರಾಜನಗರ ಠಾಣಾ ವ್ಯಾಪ್ತಿಯ ಶೋಭಾಪುರ ಗ್ರಾಮದಲ್ಲಿ ನಾಲ್ವರು ಶಂಕಿತ ಮಕ್ಕಳ ಕಳ್ಳರನ್ನು ಗ್ರಾಮಸ್ಥರು ಹೊಡೆದು ಸಾಯಿಸಿದ್ದರು. ಮರುದಿನ ಪೂರ್ವ ಸಿಂಗಭೂಮ್ ಜಿಲ್ಲೆಯ ಬಾಗ್ಬೇರಾ ಠಾಣಾ ವ್ಯಾಪ್ತಿಯ ನಾಗಾದಿ ಗ್ರಾಮದಲ್ಲಿ ಇದೇ ರೀತಿ ಮೂವರು ವ್ಯಕ್ತಿಗಳು ಗ್ರಾಮಸ್ಥರ ಹುಚ್ಚು ಆಕ್ರೋಶಕ್ಕೆ ಬಲಿಯಾಗಿದ್ದರು.

ವದಂತಿಗಳಿಂದಾಗಿ ಮೇ 19-20ರಂದು ಕಲ್ಲುತೂರಾಟ ಘಟನೆಗಳು ಮತ್ತು ಭಾರೀ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆದು ಸಾಮಾನ್ಯ ಜನಜೀವನ ವ್ಯತ್ಯಯಗೊಂಡಿತ್ತು. ಈ ಸಂಬಂಧ 102 ಜನರ ವಿರುದ್ಧ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ವದಂತಿಗಳನ್ನು ಹರಡಿತ್ತೆನ್ನಲಾದ ವಾಟ್ಸಾಪ್ ಗುಂಪಿನ ಅಡ್ಮಿನ್‌ನನ್ನು ಪೊಲಿಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದ ಡಿಜಿಪಿ ಡಿ.ಕೆ.ಪಾಂಡೆ ಅವರು ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದರು.

ಐಜಿ (ಕಾರ್ಯಾಚರಣೆಗಳು) ಆಶಿಷ್ ಬಾತ್ರಾ ಅವರು ಜಂಷೆಡ್ಪುರದಲ್ಲಿ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮೃತರ ಕುಟುಂಬಗಳಿಗೆ ತಲಾ ಎರಡು ಲ.ರೂ.ಗಳ ಚೆಕ್‌ಗಳನ್ನು ವಿತರಿಸಲಾಗಿದೆ ಎಂದು ರಾಹತೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News