ಎಲ್‌ಒಸಿಯಲ್ಲಿನ ಪಾಕ್ ಗಡಿ ಠಾಣೆಗಳನ್ನು ಧ್ವಂಸಗೊಳಿಸಲಾಗಿದೆ:ಸೇನೆ

Update: 2017-05-23 14:15 GMT

ಹೊಸದಿಲ್ಲಿ,ಮೇ 23: ಉಗ್ರರು ಭಾರತದೊಳಗೆ ನುಸುಳುವುದನ್ನು ತಡೆಯಲು ಕಾರ್ಯಾಚರಣೆಗಳ ಅಂಗವಾಗಿ ನಿಯಂತ್ರಣ ರೇಖೆಯಲ್ಲಿನ ಪಾಕಿಸ್ತಾನಿ ಗಡಿ ಠಾಣೆಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿರುವುದಾಗಿ ಭಾರತೀಯ ಸೇನೆಯು ಮಂಗಳವಾರ ತಿಳಿಸಿದೆ.

ಮರಗಳಿಂದ ಆಚ್ಛಾದಿತ ಪರ್ವತ ಪ್ರದೇಶದಲ್ಲಿಯ ಪಾಕ್‌ನ ತಾತ್ಕಾಲಿಕ ಬಂಕರ್‌ಗಳು ಮತ್ತು ಆಶ್ರಯ ತಾಣಗಳನ್ನು ಭಾರೀ ಫಿರಂಗಿ ದಾಳಿಗಳನ್ನು ನಡೆಸಿ ಧ್ವಂಸಗೊಳಿಸುತ್ತಿರುವ ಮಿಲಿಟರಿ ಕಾರ್ಯಾಚರಣೆಯ ವೀಡಿಯೊವೊಂದನ್ನು ಸಹ ಸೇನೆಯು ಬಿಡುಗಡೆ ಗೊಳಿಸಿದೆ. ‘‘ಇತ್ತೀಚಿಗೆ...ತೀರ ಇತ್ತೀಚೆಗೆ ಈ ದಾಳಿಗಳನ್ನು ನಡೆಸಲಾಗಿದೆ ’’ ಎಂದು ಸೇನೆಯ ವಕ್ತಾರ ಮೇಜಅಶೋಕ ನರುಲಾ ಅವರು ತಿಳಿಸಿದರು.

ಪಾಕ್ ಉಗ್ರರಿಂದ ಇಬ್ಬರು ಭಾರತೀಯ ಯೋಧರ ಶಿರಚ್ಛೇದನದ ಮೂರು ವಾರಗಳ ಬಳಿಕ ಭಾರತವು ಈ ಪ್ರತೀಕಾರ ದಾಳಿಗಳನ್ನು ನಡೆಸಿದೆ. ತನ್ನ ಆಯ್ಕೆಯ ಸಮಯ ಮತ್ತು ಸ್ಥಳದಲ್ಲಿ ಪ್ರತಿಕ್ರಿಯಿಸುವುದಾಗಿ ಭಾರತೀಯ ಸೇನೆಯು ಆ ಸಂದರ್ಭ ಭರವಸೆ ನೀಡಿತ್ತು.

ಭಾರತದ ಈ ದಾಳಿಗಳು ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿವೆ. ಪಾಕಿಸ್ತಾನಿ ಸೇನೆಯು ಭಾರತೀಯ ನೆಲೆಗಳತ್ತ ದಾಳಿ ನಡೆಸುತ್ತ ನೀಡುವ ನೆರವಿನೊಂದಿಗೆ ಇದೇ ನಿಯಂತ್ರಣ ರೇಖೆಯ ಮೂಲಕ ಉಗ್ರರು ಭಾರತದೊಳಗೆ ನುಸುಳುತ್ತಾರೆ.

 ಸ್ಥಳಿಯ ಯುವಕರಿಗೆ ಶಸ್ತ್ರಗಳನ್ನು ಕೈಗೆತ್ತಿಕೊಳ್ಳಲು ಉತ್ತೇಜನ ದೊರೆಯದಂತೆ ಕಾಶ್ಮೀರ ದಲ್ಲಿರುವ ಭಯೋತ್ಪಾದಕರ ಸಂಖ್ಯೆಯನ್ನು ತಗ್ಗಿಸುವದು ಮಿಲಿಟರಿ ಕಾರ್ಯಾಚರಣೆಗಳ ಉದ್ದೇಶವಾಗಿದೆ ಎಂದು ನರುಲಾ ಸುದ್ದಿಗಾರರಿಗೆ ತಿಳಿಸಿದರು.

ಭಾರತೀಯ ಸೇನಾ ನೆಲೆಗಳ ಮೇಲೆ ಗುಂಡುಗಳನ್ನು ಹಾರಿಸಿ, ಅವರನ್ನು ವ್ಯಸ್ತರನ್ನಾಗಿಸುವ ಮೂಲಕ ಪಾಕಿಸ್ತಾನಿ ಸೇನೆಯು ನುಸುಳುಕೋರರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಿದೆ ಎಂದ ನರುಲಾ, ನೌಷೇರಾ ವಿಭಾಗದಲ್ಲಿಯ ಪಾಕ್ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ತಿಳಿಸಿದರು.

ಹಿಮದ ಕರಗುವಿಕೆಯೊಂದಿಗೆ ಹೆಚ್ಚಿನ ಕಣಿವೆ ಮಾರ್ಗಗಳು ತೆರೆದುಕೊಳ್ಳುವುದರಿಂದ ನುಸುಳುವಿಕೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಮೇ 20-21ರಂದು ನಾಲ್ವರು ಭಯೋತ್ಪಾದಕರನ್ನು ಕೊಲ್ಲಲಾದ ನೌಗಾಮ್‌ನಂತಹ ಕಾರ್ಯಾಚರಣೆಗಳು ಇದಕ್ಕೆ ನಿದರ್ಶನಗಳಾಗಿವೆ. ಇದು ಇನ್ನಷ್ಟು ಹೆಚ್ಚು ಪೂರ್ವ ನಿಯಾಮಕ ಭೀತಿವಾದ ನಿಗ್ರಹ ಕಾರ್ಯಾಚರಣೆಗಳನ್ನು ಅಗತ್ಯವಾಗಿಸಿದೆ ಎಂದು ಮಾಮೂಲಾಗಿ ಬೇಸಿಗೆಯಲ್ಲಿ ಉಗ್ರಗಾಮಿಗಳ ಚಟುವಟಿಕೆಗಳು ಹೆಚ್ಚುವುದನ್ನು ಪ್ರಸ್ತಾಪಿಸಿ ನರುಲಾ ತಿಳಿಸಿದರು.

ಶೇರು ಮಾರುಕಟ್ಟೆ ಕುಸಿತ

ಮುಂಬೈ ಶೇರು ವಿನಿಮಯ ಕೇಂದ್ರದ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ ದಿನದ ವಹಿವಾಟಿನ ಕೊನೆಯ ಅರ್ಧಗಂಟೆಯಲ್ಲಿ ದಿಢೀರ್‌ನೆ ಸುಮಾರು 90 ಅಂಶಗಳಷ್ಟು ಪತನಗೊಂಡು 30,365ರಲ್ಲಿ ಅಂತ್ಯಗೊಂಡಿದೆ. ಅತ್ತ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಕೂಡ ಇದೇ ಪ್ರವೃತ್ತಿಯನ್ನು ಪ್ರದರ್ಶಿಸಿದೆ. ಪಾಕಿಸ್ತಾನಿ ಸೇನಾ ನೆಲೆಗಳ ವಿರುದ್ಧ ಭಾರತೀಯ ಮಿಲಿಟರಿ ಕಾರ್ಯಾಚರಣೆಯ ಪ್ರಕಟಣೆ ಇದಕ್ಕೆ ಕಾರಣವಾಗಿದೆಯೆಂದು ಕೆಲವು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ಪಾಕ್ ನಿರಾಕರಣೆ

ನೌಷೇರಾ ವಿಭಾಗದಲ್ಲಿಯ ಪಾಕಿಸ್ತಾನಿ ಸೇನಾ ನೆಲೆಯನ್ನು ಧ್ವಂಸಗೊಳಿಸಿರುವುದಾಗಿ ಭಾರತದ ಹೇಳಿಕೆಯು ಅಪ್ಪಟ ಸುಳ್ಳು ಎಂದು ಪಾಕ್ ಸೇನೆಯು ತಳ್ಳಿಹಾಕಿದೆ.

ನಿಯಂತ್ರಣ ರೇಖೆಯ ನೌಷೇರಾ ವಿಭಾಗದಲ್ಲಿಯ ಪಾಕಿಸ್ತಾನಿ ಸೇನಾ ನೆಲೆಯನ್ನು ಧ್ವಂಸಗೊಳಿಸಿರುವುದಾಗಿ ಮತ್ತು ಪಾಕ್ ಸೇನೆಯು ನಿಯಂತ್ರಣ ರೇಖೆಯಾಚೆಗಿನ ನಾಗರಿಕರ ಮೇಲೆ ಗುಂಡಿನ ದಾಳಿಗಳನ್ನು ನಡೆಸುತ್ತಿದೆ ಎಂಬ ಭಾರತದ ಹೇಳಿಕೆಗಳು ಸುಳ್ಳು ಎಂದು ಇಂಟರ್ ಸರ್ವಿಸಿಸ್‌ನ ಸಾರ್ವಜನಿಕ ಸಂಪರ್ಕಗಳ ನಿರ್ದೇಶಕ ಮೇಜಆಸಿಫ್ ಗಫೂರ್ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News