ಪ್ರಾಕೃತಿಕ ವಿಕೋಪ ನಿಭಾಯಿಸಲು ಎನ್‌ಡಿಆರ್‌ಎಫ್ ಮಾಹಿತಿ
ಉಡುಪಿ, ಮೇ 23: ನೈಸರ್ಗಿಕ ಹಾಗೂ ಮಾನವ ನಿರ್ಮಿತ ವಿಕೋಪಗಳನ್ನು ನಿಭಾಯಿಸುವ ಕುರಿತು ಕಾಪುವಿನ ದಂಡತೀರ್ಥ ಶಾಲೆಯಲ್ಲಿ ಜಿಲ್ಲಾಡಳಿತ, ಎನ್‌ಡಿಆರ್‌ಎಫ್‌ನ ನೆರವಿನಿಂದ ಸಮುದಾಯ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು.
ಆಂಧ್ರ ಪ್ರದೇಶದ ಗುಂಟೂರು ಎನ್‌ಡಿಆರ್‌ಎಫ್ ಕೇಂದ್ರದ ಕ್ಯಾಪ್ಟನ್ ಎಸ್.ಎನ್.ಎ. ರಸೂಲ್ ನೇತೃತ್ವದ ಬಟಾಲಿಯನ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಉಡುಪಿ ಜಿಲ್ಲೆಯಲ್ಲಿ ಎನ್‌ಡಿಆರ್‌ಎಫ್ ಮೊದಲ ಕಾರ್ಯಕ್ರಮ ಇದಾಗಿತ್ತು.
ದಂಡತೀರ್ಥ ಶಾಲೆಯ ವಿದ್ಯಾರ್ಥಿಗಳಿಗೆ ನೆರೆ, ಬಿರುಗಾಳಿ ಸಂದರ್ಭ ನಿರ್ವಹಣೆ, ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ಮಾಹಿತಿ ನೀಡಲಾಯಿತು. ಅಲ್ಲದೇ ನೀರಲ್ಲಿ ಬಿದ್ದವರನ್ನು ಬದುಕಿಸುವ ಬಗೆಯೂ ಪ್ರಾತ್ಯಕ್ಷಿಕೆ ಮೂಲಕ ವಿವರಿಸ ಲಾಯಿತು. ರಾಷ್ಟ್ರೀಯ ವಿಪತ್ತು ನಿರ್ವಹಣೆಯ ಕರ್ತವ್ಯಗಳನ್ನು ವಿವರಿಸಿದ ರಸೂಲ್, ಭೂಕಂಪ, ನೆರೆಯಂತಹ ಸಂದರ್ಭಗಳಲ್ಲಿ ವಿಪತ್ತು ನಿರ್ವಹಣೆ ಪಡೆಯ ಕಾರ್ಯಾಚರಣೆ ಪರಿಯವನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಉಡುಪಿ ಗೃಹರಕ್ಷಕ ದಳದ ಡೆಪ್ಯುಟಿ ಕಮಾಂಡೆಂಟ್ ಡಾ.ಪ್ರಶಾಂತ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ವಾಸುದೇವ್, ಶಾಲಾಡಳಿತ ಮಂಡಳಿಯ ಆಲ್ಬರ್ಟ್ ರೊಡ್ರಿಗಸ್, ಹೋಮ್‌ಗಾರ್ಡ್ ಡೆಪ್ಯುಟಿ ಕಮಾಂಡೆಂಟ್ ರಮೇಶ್ ಉಪಸ್ಥಿತರಿದ್ದರು. ಪ್ರಾಂಶುಪಾಲ ನೀಲಾನಂದ ನಾಯಕ್ ಸ್ವಾಗತಿಸಿ, ಶಿವಣ್ಣ ಬಾಯರ್ ಕಾರ್ಯಕ್ರವು ನಿರೂಪಿಸಿದರು.