ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪಿಯುಸಿ ಶಿಕ್ಷಣಕ್ಕೆ ಅರ್ಜಿ ಆಹ್ವಾನ
ಉಡುಪಿ, ಮೇ 23: ರಾಜ್ಯ ಸರಕಾರ ಸ್ಥಾಪಿಸಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ 6ರಿಂದ 10ನೇ ತರಗತಿಯವರೆಗೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ/ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ 6ರಿಂದ 10ನೇ ತರಗತಿವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಪ್ರತಿಭಾನ್ವಿತ ಗ್ರಾಮೀಣ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಈ ಕಾಲೇಜುಗಳಲ್ಲಿ ಪ.ಜಾತಿ/ ಪ.ವರ್ಗ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಪ್ರಥಮ ಮತ್ತು ದ್ವಿತೀಯ ಪದವಿ ಪೂರ್ವ (ವಿಜ್ಞಾನ) ಶಿಕ್ಷಣವನ್ನು ಕಲ್ಪಿಸಲಾಗಿದೆ.
ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜುಗಳಲ್ಲಿ ಶೇ.50 ಸೀಟುಗಳು ವಿದ್ಯಾರ್ಥಿನಿಯರಿಗೆ ಹಾಗೂ ಶೇ.50 ಸೀಟುಗಳು ವಿದ್ಯಾರ್ಥಿಗಳಿಗೆ ಲಭ್ಯವಿರುತ್ತವೆ.
ಒಂದು ಬಾರಿ ಈ ವಸತಿ ಶಾಲೆಗೆ ಸೇರ್ಪಡೆಗೊಂಡ ವಿದ್ಯಾರ್ಥಿ 12ನೇ ತರಗತಿಯವರೆಗೆ ನಿರಂತರ ವಿದ್ಯಾಭ್ಯಾಸ ಮಾಡಬಹುದಾಗಿದೆ. ಪದವಿ ಪೂರ್ವ ಕಾಲೇಜುಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲೇ ಸಂಪೂರ್ಣ ಶಿಕ್ಷಣ ನೀಡಲಾಗುತ್ತಿದೆ.
2017-18ನೇ ಸಾಲಿನಲ್ಲಿ ಈ ವಸತಿ ಶಾಲೆಗಳ ಪ್ರಥಮ ಪಿಯುಸಿಯ ಪಿಸಿಎಂಬಿ ಹಾಗೂ ಪಿಸಿಎಂಸಿ ಸಂಯೋಜನೆಗಳಿಗೆ ತಲಾ 40 ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುವುದು. ಈ ವರ್ಷ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಎಸೆಸೆಲ್ಸಿ ತೇರ್ಗಡೆಗೊಂಡಿರುವ ಹಾಗೂ ಈ ಮೊದಲು ಉತ್ತೀರ್ಣಗೊಂಡಿರುವ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ತರಗತಿ ದಾಖಲಾತಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಿ, ನಂತರ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಅರ್ಜಿಗಳನ್ನು ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆ ಓಂತಿಬೆಟ್ಟು ಕಾಪು, ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆ ಕೋಟೇಶ್ವರ ಕುಂದಾಪುರ, ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆ ಮಿಯಾರು ಕಾರ್ಕಳ, ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆ ಬೈಂದೂರು, ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜು ಮಿಯಾರು ಕಾರ್ಕಳ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ರಜತಾದ್ರಿ ಮಣಿಪಾಲ ಇಲ್ಲಿಂದ ಪಡೆಯಬಹುದಾಗಿದ್ದು, ಮೇ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಈ ಕುರಿತ ಹೆಚ್ಚಿನ ವಿವರಗಳನ್ನು ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಉಡುಪಿ (ದೂರವಾಣಿ ಸಂಖ್ಯೆ: 0820-2574881, 0820-2573881) ಇವರಿಂದ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.