ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ಸೆರೆ
ಉಡುಪಿ, ಮೇ 23: ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕೋಡಿಬೆಂಗ್ರೆ ಎಂಬಲ್ಲಿ ಅಪ್ರಾಪ್ತೆ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕೋಡಿಬೆಂಗ್ರೆಯ ಯಾದವ್(30) ಎಂದು ಗುರುತಿಸ ಲಾಗಿದೆ.
ಈತ ತನ್ನ ಮನೆ ಸಮೀಪ ಆಟ ಆಡುತ್ತಿದ್ದ ನೆರೆಮನೆಯ 11ವರ್ಷ ಹರೆಯದ ಬಾಲಕಿಯನ್ನು ಮನೆಯೊಳಗೆ ಕರೆದು ದೌರ್ಜನ್ಯ ಎಸಗಿದ್ದು, ಕೂಡಲೇ ಬಾಲಕಿಯ ಮನೆ ಯಿಂದ ಹೊರಗಡೆ ಓಡಿ ಬಂದು ತನ್ನ ಮನೆಯವರಲ್ಲಿ ವಿಷಯ ತಿಳಿಸಿದಳು ಎನ್ನಲಾಗಿದೆ.
ಮನೆಯವರು ಹಾಗೂ ಸ್ಥಳೀಯರು ಒಟ್ಟಾಗಿ ಮನೆಯೊಳಗಿದ್ದ ಯಾದವ್ ನನ್ನು ಹಿಡಿದು ಮಲ್ಪೆ ಪೊಲೀಸರಿಗೆ ಒಪ್ಪಿಸಿದ್ದರು. ಇಂದು ಮಲ್ಪೆ ಪೊಲೀಸರು ಈ ಪ್ರಕರಣವನ್ನು ಉಡುಪಿ ಮಹಿಳಾ ಪೊಲೀಸ್ ಠಾಣೆ ಹಸ್ತಾಂತರಿಸಿದ್ದು, ಅದರಂತೆ ಮಹಿಳಾ ಪೊಲೀಸರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿ ಮೀನುಗಾರಿಕೆ ವೃತ್ತಿ ಮಾಡುತ್ತಿದ್ದನು.
ಬಾಲಕಿಯ ತಂದೆ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೊಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದೆ.