×
Ad

‘ಬಾಲ್ಯದಲ್ಲಿ ಕಲಿತ ಉತ್ತಮ ವಿಷಯಗಳು ಭವಿಷ್ಯದ ಜೀವನಕ್ಕೆ ದಾರಿದೀಪ’

Update: 2017-05-23 22:09 IST

ಉಡುಪಿ, ಮೇ 23: ವಿದ್ಯಾರ್ಥಿ ಜೀವನದಲ್ಲಿ ಗ್ರಹಿಸುವಿಕೆಯ ಶಕ್ತಿ ಅಪಾರವಾಗಿರುತ್ತದೆ. ಬಾಲ್ಯದಲ್ಲಿ ಕಲಿತುಕೊಂಡ ವಿಷಯಗಳು ಮಾನವನ ಉಳಿದ ಜೀವನಕ್ಕೆ ದಾರಿದೀಪವಾಗುತ್ತವೆ. ಆದುದರಿಂದ ಬಾಲ್ಯ ಜೀವನದಲ್ಲಿ ಸಮಯ ವ್ಯರ್ಥ ಮಾಡದೇ ಸಾಕಷ್ಟು ಉತ್ತಮ ವಿಚಾರಗಳಲ್ಲಿ ನಮ್ಮನ್ನು ನಾವು ತೊಡಗಿಸಿ ಕೊಳ್ಳಬೇಕು ಎಂದು ಉಡುಪಿ ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಸುಷ್ಮಾ ಎಸ್. ಹೇಳಿದ್ದಾರೆ.

ತೆಂಕನಿಡಿಯೂರು ಶ್ರೀಕಾಳಿಕಾಂಬಾ ಭಜನಾ ಸಂಘದ ಬಾಲ ಸಂಸ್ಕಾರ ಕೇಂದ್ರದ ವತಿಯಿಂದ ಕಾಳಿಕಾಂಬಾ ಸಭಾಭವನದಲ್ಲಿ ಆಯೋಜಿಸಲಾದ ವಿಕಾಸ ಬೇಸಿಗೆ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬೇಸಿಗೆ ಶಿಬಿರಗಳು ಪಠ್ಯಗಳಲ್ಲಿರುವ ಸೈದ್ಧಾಂತಿಕ ವಿಷಯಗಳಲ್ಲಿ ಸಿಗದ ಸಹಬಾಳ್ವೆಯ ಜೀವನಕ್ಕೆ ಅಗತ್ಯವಿರುವ ಪರಸ್ಪರ ಸಹಕಾರ, ಸೌಹಾರ್ದ, ಜವಾಬ್ದಾರಿ, ಟೀಮ್‌ವರ್ಕ್‌ಗಳಂತಹ ವಿಷಯಗಳನ್ನೂ ಕೂಡ ಕಲಿಸುತ್ತದೆ ಎಂದರು.

ವೇದಿಕೆಯಲ್ಲಿ ಶ್ರೀದೇವಿ ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಅಪ್ಪಿ ಶಿವಯ್ಯ ಆಚಾರ್ಯ ಉಪಸ್ಥಿತರಿದ್ದರು. ಶ್ರೀಕಾಳಿಕಾಂಬಾ ಭಜನಾ ಸಂಘದ ಗೌರವಾಧ್ಯಕ್ಷ ಟಿ.ವಾದಿರಾಜ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಮಾರ್ಗದರ್ಶಕ ಬಿ.ವಾಸುದೇವ ಆಚಾರ್ಯ ಪರ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸುಷ್ಮಾ ರಾಜೇಶ್ ಸ್ವಾಗತಿಸಿದರು. ಪ್ರದೀಪ್ ಆಚಾರ್ಯ ವಂದಿಸಿದರು. ರೋಹಿತ್ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News