ಆ್ಯಕ್ಸಿಸ್ ಬ್ಯಾಂಕ್ ಕರೆನ್ಸಿ ಚೆಸ್ಟ್‌ನಿಂದ 7.5 ಕೋಟಿ ರೂ. ಕಳವು ಪ್ರಕರಣ: ಮತ್ತಿಬ್ಬರು ಆರೋಪಿಗಳ ಸೆರೆ
Update: 2017-05-23 22:14 IST
ಮಂಗಳೂರು, ಮೇ 23: ಯೆಯ್ಯಡಿಯ ಆ್ಯಕ್ಸಿಸ್ ಬ್ಯಾಂಕ್ ಕರೆನ್ಸಿ ಚೆಸ್ಟ್‌ನಿಂದ 7.5 ಕೋಟಿ ರೂ. ಹಣವನ್ನು ಬೆಂಗಳೂರಿನ ಕೋರಮಂಗಲಕ್ಕೆ ಬೊಲೆರೋ ವಾಹನದಲ್ಲಿ ಸಾಗಿಸುವ ವೇಳೆ ಹಣ ಕದ್ದು ಪರಾರಿಯಾದ ಘಟನೆಗೆ ಸಂಬಂಧಿಸಿ ಪೊಲೀಸರು ಮಂಗಳವಾರ ಮತ್ತಿಬ್ಬರು ಆರೋಪಿಗಳನ್ನ್ನು ಬಂಧಿಸಿದ್ದಾರೆ.
ಈ ಮೂಲಕ ಬಂಧಿತರ ಸಂಖ್ಯೆ ಐದಕ್ಕೇರಿದೆ. ಬಂಧಿತರನ್ನು ಮಡಿಕೇರಿ ಸೋಮವಾರಪೇಟೆ ತಾಲೂಕಿನ ಸುರ್ಲಬಿ ನಿವಾಸಿ ರವಿ ಯಾನೆ ರವೀಂದ್ರ (42), ಮನು ಯಾನೆ ಮನೀಷ್ (45) ಎಂದು ಗುರುತಿಸಲಾಗಿದೆ.
ಮೇ 12ರಂದು ಘಟನೆ ನಡೆದಿದ್ದು, ಮೇ 16ರಂದು ಗನ್‌ಮ್ಯಾನ್ ಟಿ.ಎ.ಪೂವಣ್ಣ, ವಾಹನ ಚಾಲಕ ಚಿತ್ರದುರ್ಗದ ಟಿ.ಪಿ.ಕರಿಬಸಪ್ಪ, ಹಾಗೂ ಕೊಡಗು ಜಿಲ್ಲೆಯ ಕುಂಬಾರಗಡಿಗೆ ಗ್ರಾಮದ ಕಾಶಿಯಪ್ಪನನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೆ ಅವರಿಂದ ಕುಂಬಾರ ಗಡಿಗೆಯೊಂದರ ಮನೆ ಯಲ್ಲಿ ಬಚ್ಚಿಟ್ಟಿದ್ದ 6.3 ಕೋಟಿ ರೂ. ಹಣ ವಶಪಡಿಸಿಕೊಳ್ಳಲಾಗಿತ್ತು.